ದಿನಾಂಕ 8.6.2015. ಸ್ಥಳ ಕವಿತಾ ಕಟೀರ ಕಲ್ಲಕಳೆಯ ಬದಿಯಡ್ಕ.

0
558

ದಿನಾಂಕ 8.6.2015. ಸ್ಥಳ ಕವಿತಾ ಕಟೀರ ಕಲ್ಲಕಳೆಯ ಬದಿಯಡ್ಕ. ಅಂದು ಶತಾಯುಷ್ಯ ಪೂರ್ಣಗೊಂಡ ಕನ್ನಡ ಕುವರ ಮೇರು ಕವಿ ಕಯ್ಯಾರ ಕಿಞ್ಞಣ್ಣ ರೈಯವರ 101ನೇ ಹುಟ್ಟುಹಬ್ಬದ ಸಂಭ್ರಮ. ಸಮಯ ಬೆಳಿಗ್ಗೆ 9.30ಕ್ಕೆ ಕಾರ್ಯಕ್ರಮ ಪ್ರಾರಂಭ. ವೇದಿಕೆಯ ಲ್ಲಿ ಮಂತ್ರಿಗಳು, ಕವಿಗಳು, ಸಾಹಿತಿಗಳು ಹಾಗೂ ಇತರ ಪ್ರಮುಖರು. ಉದ್ಘಾಟನೆ ನ್ಯಾಯ ಮೂರ್ತಿ ಸಂತೋಷ್ ಹೆಗ್ಡೆ. ಇವರೆಲ್ಲರ ಮಧ್ಯದಲ್ಲಿ ನವಗ್ರಹಗಳ ಕೇಂದ್ರದಲ್ಲಿದ್ದ ಸೂರ್ಯನಂತೆ ಕಯ್ಯಾರರ ಉಪಸ್ಥಿತಿ. ಕಾರ್ಯಕ್ರಮ ಆರಂಭದಿಂದ ಮಧ್ಯಾಹ್ನ 1.50 ತನಕ ವೇದಿಕೆಯಲ್ಲಿ ಪ್ರಮುಖರಿಗೆ ಗುಣಗಾನ ಮಾಡಲು 10 ನಿಮಿಷ ಮಾತ್ರ ಕೊಡಲಾಯಿತು. ಇದನ್ನೆಲ್ಲಾ ಕಣ್ಣ್ಣಾರೆ ಕಂಡು, ಕಿವಿಯಾರೆ ಕೇಳಿದರೂ ಆ ಜೀವ ಅರಗಿಸಿ ಕೊಂಡಿರಲಾರದೆಂದು ಎಲ್ಲರ ಅನಿಸಿಕೆಯಾದರೆ ಸ್ಥಿತಿ ಪ್ರಜ್ಞರಾಗಿ ಈ ಶತಾಯುಷಿ 5 ತಾಸುಗಳ ತನಕ ಒಂದೇ ಸ್ಥಿತಿಯಲ್ಲಿ ಕೂರುವುದೆಂದರೆ ಸಾಮಾನ್ಯವೇ? ಅಂತೂ ಮಧ್ಯಾಹ್ನದ ಸವಿಯೂಟದ ಸಮಯ. ಈ ಗೋಷ್ಠಿಯ ಅಂತ್ಯದ ಲ್ಲಿ ಕಯ್ಯಾರರಿಂದ ಒಂದೆರೆಡು ಕೃತಜ್ಞತಾ ಸಂದೇಶಕ್ಕಾಗಿ ಎಲ್ಲರ ಕಾತರ. ಅವರ ಮಕ್ಕಳಲ್ಲಿ ಇಬ್ಬರು ಮೈಕ್್ನ್ನು ಹತ್ತಿರ ಹಿಡಿದು ವಿನಂತಿಸಿಕೊಂಡರು. ಉತ್ತರವಿಲ್ಲ. ಹೇಳಬೇಕಾದ ಒಂದೆರೆಡು ವಾಕ್ಯಗಳನ್ನು ಮಕ್ಕಳು ಕಿವಿಯಲ್ಲಿ ಉಸುರಿದರು. ಕೇಳಿಸಿಕೊಂಡಂತಿಲ್ಲ. ಈ ಪ್ರಕ್ರಿಯೆ ಐದಾರು ನಿಮಿಷಗಳ ಕಾಲ ಸಾಗಿತು. ಇನ್ನೇನು ಇವರಿಂದ ಉತ್ತರ ಸಿಗುವುದಿಲ್ಲವೆಂದು ಅವರ ಬಳಿಯಿಂದ ಪುತ್ರರಿಬ್ಬರು ನಿರಾಶೆಯಿಂದ ಎದ್ದು ನಿಂತರು. ಆ ಕ್ಷಣದಲ್ಲಿ ಮುಖದಲ್ಲಿದ್ದ ನಿರಾಶಾ ಭಾವವನ್ನು ಬದಿಗೊತ್ತಿ, ಭೀಷ್ಮಾಚಾರ್ಯರಂತೆ ಸಭೆಗೂ ವೇದಿಕೆಗೂ ಕೈಯಾಡಿಸಿ ಮಾತುಗಾರಿಕೆಗೆ ಪ್ರಾರಂಭಿಸಿದಾಗ ನಾಲ್ಕು ದಶಕದ ಹಿಂದಿನ ಅದೇ ಸ್ವರ, ಅದೇ ತೇಜಸ್ಸು, ಅದೇ ಗಾಂಭೀರ್ಯದಿಂದ ತನ್ನ ಬಾಲ್ಯದ ಆಟ ಪಾಠ, ತನ್ನ 15 ವರ್ಷ ಪ್ರಾಯದಲ್ಲಿ ಕಾಲು ನಡಿಗೆಯಲ್ಲಿ ಮಂಗಳೂರಿಗೆ ಹೋಗಿ ಮಹಾತ್ಮ ಗಾಂಧೀಜಿಯರನ್ನು ಕಂಡು ಸ್ವಾತಂತ್ರ್ಯ ಸಂಗ್ರಾಮಕ್ಕೆ ಪಾದಾರ್ಪಣೆ. ಕನ್ನಡ ನಾಡು ನುಡಿಗಾಗಿ ಹೋರಾಟ. ಕಿತ್ತು ತಿನ್ನುವ ಬಡತನದ ಕಾಲ. ಕೋಳಿ ಕೂಗುವಾಗ ಎದ್ದು ಹೊಲದಲ್ಲಿ ದುಡಿದು ವಿದ್ಯೆ ಕಲಿತದ್ದು. ಅರೆ ಹೊಟ್ಟೆಯಲ್ಲಿ, ಒಟ್ಟೆ(ತೂತು) ಬಟ್ಟೆಯಲ್ಲಿ ದೇಶಕ್ಕಾಗಿ, ಮಾತೃಋಣಕ್ಕಾಗಿ ಹೋರಾಡುವ ಕೆಚ್ಚು ಇತ್ತು. ಆದರೆ ಸದ್ಯ ಎಲ್ಲಾ ಅನುಕೂಲತೆ ಇದ್ದರೂ ನಮ್ಮ ನಾಡಿನ, ನಮ್ಮ ದೇಶದ ಕೃಷಿಯು ಅವನತಿಯನ್ನು ಕಾಣುತ್ತಿದ್ದೇನೆ. ಮಣ್ಣನ್ನು ಪ್ರೀತಿಸಿ, ಕೃಷಿಯನ್ನು ಉಳಿಸಿ ಬೆಳೆಸಿರಿ, ಕನ್ನಡ ನಾಡ ಗಡಿಯ ರಕ್ಷಣೆ ಅಸಾಧ್ಯವಾದರೆ ಕನ್ನಡ ನುಡಿಯನ್ನಾದರೂ ರಕ್ಷಿಸಿ. ಇದೇ ನೀವು ನನಗೆ ಸಲ್ಲಿಸಬೇಕಾದ ಅತೀ ದೊಡ್ಡ ಸನ್ಮಾನ. ಹೀಗೆಂದಾಗ ಅವರ ಕಣ್ಣಂಚಿನಲ್ಲಿ ಒಂದೆರೆಡು ಕಣ್ಣೀರ ಹನಿ ಕಂಡು ಮಾಯವಾಯಿತು. ಇದು ಕಯ್ಯಾರರ ಅಂತಿಮ ಸಾರ್ವಜನಿಕ ಭಾಷಣ (ಸಂದೇಶ)ವೆಂದು ಯಾರೂ ಅನಿಸಿರ ಲಿಲ್ಲವಾದರೂ ಅದೇ ಸತ್ಯವಾಯಿತು. ಇದನ್ನು ಕೇಳಿದ ಸಭೆ ಒಮ್ಮೆ ಸ್ತಂಭೀಭೂತವಾಯಿತು. ಸಾಧಾರಣ 10 ನಿಮಿಷ ಕಾಲ ಸಾಗಿತು. ಮುಗಿಸುವ ಹಂತ ಕಾಣದಾಗ ಹೆದರಿದ ಮಕ್ಕಳು ಕೈ ಮುಗಿದು ಕೈಗಡಿಯಾರವನ್ನು ತೋರಿಸಿದರು. ಆಗ ಮಂದಸ್ಮಿತರಾಗಿ “ಕಾಲ ಮಿತಿ” ನನಗೂ ಅನ್ವಯವೇ.. ಸರಿ.. ‘ನಾನು ಕಾಲಕ್ಕೆ ಅತೀತ ನಲ್ಲವಲ್ಲ’ ಎಂಬ ಅರ್ಥಗರ್ಭಿತವಾಗಿ ನುಡಿದು ಕೈ ಮುಗಿದು ಮಾತಿಗೆ ವಿರಾಮ ನೀಡಿದರು. ಆ ಸಮಯಕ್ಕೆ ಸರಿಯಾಗಿ ಅವರ ‘ಮೊಮ್ಮಕ್ಕಳು ಬಂದು ಆ ಅಜಾನು ಬಾಹು ದೇಹವನ್ನು ಅವರು ವಿಶ್ರಮಿಸುವ ಪಲ್ಲಕಿಯಲ್ಲಿ ಕೂರಿಸಿ ವೇದಿಕೆಯಿಂದ ಕವಿತಾ ಕುಟೀರಕ್ಕೆ ಸಾಗುವಾಗ ಹೂವಿನ ತೇರು ಸಾಗುವುದೋ ಎಂದೆನಿಸಿತು. ಇದನ್ನು ನೋಡುವಾಗ ಒಂದಂತೂ ಸತ್ಯವಾಯಿತು. ಇವರು ಮಕ್ಕಳಿಗೆ (ಸಂಸಾರ)ಕ್ಕೆ ಆಸ್ತಿ ಮಾಡಲಿಲ್ಲ. ಮಕ್ಕಳನ್ನೇ ಆಸ್ತಿ ಮಾಡಿಕೊಂಡಿದ್ದಾರೆ. ಇಲ್ಲಿ ‘ನೀ ನನಗಿದ್ದರೆ ನಾ ನಿನಗೆ’ ಎಂಬ ಸಂದೇಶವಿತ್ತು. ಐಕ್ಯಗಾನದ ಸಾರವಿತ್ತು. ಈ ವಂಶವೃಕ್ಷ ಹೀಗೆಯೇ ಬೆಳೆಯಲಿ. ನಾಡಿಗೆ ಆಸರೆಯಾಗಲಿ ಎಂದು ಆಶಿಸೋಣ. ಕಯ್ಯಾರ ಅಂತಿಮ ಆಶೆ ಈಡೇರಲೆಂದು ಪ್ರಾರ್ಥಿಸೋಣ.

NO COMMENTS

LEAVE A REPLY