ಕೃಷಿಕರಿಗೆ ದ್ರೋಹ ಬಗೆದ ಕಿಡಿಗೇಡಿಗಳು ಅಣೆಕಟ್ಟಿನ ಹಲಗೆ ಮುರಿದು ನೀರು ಸಮುದ್ರಪಾಲು

0
32

ಮಂಜೇಶ್ವರ: ಬಂಗ್ರಮಂಜೇಶ್ವರ ಹೊಳೆಗೆ ಕಟ್ಟಲಾಗಿದ್ದ ಅಣೆಕಟ್ಟಿನ ಹಲಗೆಯನ್ನು ಕಿಡಿಗೇಡಿಗಳು ಮುರಿದು ನಾಶಪಡಿಸಿದ ಸ್ಥಿತಿಯಲ್ಲಿ ಇಂದು ಬೆಳಿಗ್ಗೆ ಪತ್ತೆಯಾಗಿದೆ. ಮಂಜೇಶ್ವರ ಪಂಚಾಯತ್‌ನ ೯ನೇ ವಾರ್ಡ್ ಬಡಾಜೆಯಲ್ಲಿ ಬಂಗ್ರಮಂಜೇಶ್ವರ ಹೊಳೆಗೆ ಕಟ್ಟಲಾಗಿದ್ದ ಅಣೆಕಟ್ಟಿನ ಹಲಗೆಯನ್ನು ಮುರಿದು ತೆಗೆಯಲಾಗಿದ್ದು, ಇದರಿಂದಾಗಿ ಇಲ್ಲಿ ಸಂಗ್ರಗೊಂಡಿದ್ದ ನೀರೆಲ್ಲ ಹರಿದು ಹೋಗಿ ಹೊಳೆ ಖಾಲಿಯಾಗಿದೆ.

ಆರು ವರ್ಷದ ಹಿಂದೆ ಈ  ಪ್ರದೇಶದ ಕೃಷಿಕರ ಕೃಷಿಗಾಗಿ ಉಪಯೋಗಿಸಲು ಜಲಪ್ರಾಧಿಕಾರ ಇಲಾಖೆ ಊರವರ ಸಹಕಾರದೊಂದಿಗೆ ಕಟ್ಟಿದ ಅಣೆಕಟ್ಟು ಇದಾಗಿದ್ದು ಇದರಲ್ಲಿ ಸುಮಾರು  ಹತ್ತು ಅಡಿ ನೀರು ಸಂಗ್ರಹಗೊಂಡಿತ್ತು. ಸುಮಾರು ೨೦ ಎಕ್ರೆ ಸ್ಥಳದಲ್ಲಿರುವ ಭತ್ತ, ಅಡಿಕೆ ಮೊದಲಾದ ಕೃಷಿಗೆ ಇದರಿಂದ ಕೃಷಿಕರು ನೀರು ಉಪಯೋಗಿಸುತ್ತಿದ್ದರು. ಆದರೆ ಇಂದು ಬೆಳಿಗ್ಗೆ ನೋಡಿದಾಗ ಅಣೆಕಟ್ಟಿನ ಹಲಗೆಯನ್ನು ಮುರಿದು ತೆಗೆದು ಪಕ್ಕದಲ್ಲೇ ಬಿಸಾಡಲಾಗಿದೆ. ಇದರಿಂದಾಗಿ ನೀರೆಲ್ಲ ಸೋರಿ ಹೊಸಬೆಟ್ಟು ಕಡಪ್ಪುರದಲ್ಲಿ ಸಮುದ್ರ ಸೇರಿದೆ. ಕೃಷಿಗೆ ನೀರುಣಿಸಬೇಕಾದ ಈ ಕಾಲದಲ್ಲಿ ಸಂಗ್ರಹಗೊಂಡ ನೀರನ್ನು ಹರಿಯ ಬಿಟ್ಟು ಕಿಡಿಗೇಡಿಗಳು ಕೃಷಿಕರ ಬದುಕಲ್ಲಿ ಆಟ ಆಡುತ್ತಿದ್ದು, ಇಂತ ಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳ ಬೇಕೆಂದು ಕೃಷಿಕರು  ಆಗ್ರಹಿಸಿದ್ದಾರೆ.

ಸ್ಥಳಕ್ಕೆ ಪಂಚಾಯತ್‌ನ ಮಾಜಿ ಸದಸ್ಯ ಯಾದವ ಬಡಾಜೆ ಭೇಟಿ ನೀಡಿ ಪರಿಶೀಲಿಸಿದರು. ಕಿಡಿಗೇಡಿಗಳ ಕೃತ್ಯವನ್ನು ಅವರು ಖಂಡಿಸಿದ್ದು ಬ್ಲೋಕ್ ಪಂ. ಹಾಗೂ ಪಂಚಾಯತ್ ಅಧಿಕಾರಿಗಳು ಸೂಕ್ತ ಕ್ರಮಕೈ ಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

NO COMMENTS

LEAVE A REPLY