ಚಿರನಿದ್ರೆಗೆ ಜಾರಿದ ಕಯ್ಯಾರರು

0
812

ಸ್ವಾತಂತ್ರ್ಯ ಹೋರಾಟಗಾರ, ಗಡಿನಾಡಿನ ಗಾಂಧಿ, ಶತಮಾನದ ಕವಿ, ಪತ್ರಿಕೋದ್ಯಮಿ, ಪಂಪ ಪ್ರಶಸ್ತಿ ವಿಜೇತ ನಾಡೋಜ ಡಾ. ಕಯ್ಯಾರ ಕಿಞ್ಞಣ್ಣ ರೈಯವರ ಅಗಲುವಿಕೆಯಿಂದಾಗಿ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವುಂಟಾಗಿದೆ. ಸಪ್ತಭಾಷಾ ಸಂಗಮಭೂಮಿಯಾದ ಕಾಸರಗೋಡಿನ ಮಣ್ಣಿನಿಂದ ಮೇಲೆದ್ದು ಬಂದ ಬಹುಮುಖ ಪ್ರತಿಭೆಯು ಚಿರನಿದ್ರೆಗೆ ಜಾರಿಹೋಯಿತು. ಒಬ್ಬ ಸತ್ಯಾಗ್ರಹಿ ಯಾವಾಗಲೂ ಕೂಡಾ ಜನರ ಪರವಾಗಿ ನಿಲ್ಲಬೇಕು ಎಂಬ ಮನೋಧರ್ಮವಾಗಿತ್ತು ಕಯ್ಯಾರರನ್ನು ಕನ್ನಡಿಗರ ಪ್ರೀತಿಯ ನಾಯಕನನ್ನಾಗಿ ರೂಪಿಸಿದ್ದು.

ಕಯ್ಯಾರರ ಬಹುಮುಖ ಪ್ರತಿಭೆಯನ್ನು ಸಂಕ್ಷಿಪ್ತವಾಗಿ ನಾಲ್ಕು ಹಂತದಲ್ಲಿ ವಿಂಗಡಿಸಬಹುದು.  ಮೊದಲನೆಯದಾಗಿ ಕೃಷಿ, ಎರಡನೆಯದ್ದು ಅಧ್ಯಾಪನ, ಮೂರನೆಯದ್ದು ಸಾಹಿತ್ಯ ಹಾಗೂ ನಾಲ್ಕನೆಯದ್ದು ಹೋರಾಟ ಪ್ರವೃತ್ತಿ. ಲೇಖನಿಯಂತೆ ನೇಗಿಲೂ ಕೂಡಾ ಕಯ್ಯಾರರಿಗೆ ಒಲಿದು ಬಂದಿತ್ತು. ನಮ್ಮ ಸೃಜನಶೀಲತೆಗೆ ಮಣ್ಣು ಒಂದು ವೇದಿಕೆ. ಕೃಷಿ ಮತ್ತು ಕಾವ್ಯ ಇವೆರಡೂ ನನ್ನನ್ನು ಮನುಷ್ಯನನ್ನಾಗಿ ಮಾಡಿವೆ ಎಂದು ತಮ್ಮ ಜೀವನದ ಕೊನೆಯ ಗಳಿಗೆಯವರೆಗೂ ಹೇಳುತ್ತಿದ್ದರು. ಕೃಷಿಯು ಅವರ ಸಾಧನೆಯ ಒಂದು ಭಾಗವಾದರೆ ಹಸಿರು ಅವರ ಜೀವನದ ಉಸಿರಾಗಿತ್ತು. ಕುಳಿತಿರುವ ಜನರಿಗಿಂತಲೂ ಎದ್ದು ಚಟುವಟಿಕೆಯಿಂದ ದುಡಿಯುವ ಜನರು ಹೆಚ್ಚು ದಿನ ಬದುಕುತ್ತಾರೆ ಎಂದು ಅವರು ಯಾವಾಗಲೂ ಹೇಳುತ್ತಿದ್ದರು.

ನಾನು ಚಿಕ್ಕವನಿದ್ದಾಗ, ಕಯ್ಯಾರರು ಬದಿಯಡ್ಕ ಪೇಟೆಯಿಂದ ಕಲ್ಲಕಳಯದಲ್ಲಿರುವ ಅವರ ಮನೆಗೂ, ಮನೆಯಿಂದ ಪೇಟೆಗೂ ನಡೆದುಕೊಂಡು ಹೋಗುತ್ತಿರುವಾಗ ಆಜಾನುಬಾಹುವಾದ ಅವರ ದೇಹವನ್ನು ಬೆರಗುಗಣ್ಣುಗಳಿಂದ ನೋಡುತ್ತಿದ್ದ್ದೆನು. ಕಯ್ಯಾರರು ಸ್ವಾತಂತ್ರ್ಯ ಹೋರಾಟಗಾರರೂ, ಕವಿಗಳೂ ಆಗಿದ್ದರೂ ಕೂಡಾ ಬದಿಯಡ್ಕದವರು ಅವರನ್ನು ಕರೆಯುವುದು ಕಿಞ್ಞಣ್ಣ ರೈ ಮಾಸ್ತರ್ ಎಂದೇ ಆಗಿದೆ. ಸುಮಾರು ಮೂವತ್ತೆರಡು ವರ್ಷಗಳ ಕಾಲ ಪೆರಡಾಲ  ನವಜೀವನ ಹೈಸ್ಕೂಲ್‌ನಲ್ಲಿ ಅಧ್ಯಾಪನ ಮಾಡಿ ವಿದ್ಯಾರ್ಥಿಗಳಲ್ಲಿ ಹಾಗೂ ಊರವರಲ್ಲಿ ಅವರು ಒಬ್ಬ ಶ್ರೇಷ್ಠ ಅಧ್ಯಾಪಕನ ಛಾಪನ್ನು ಮೂಡಿಸಿದ್ದಾರೆ.

ಕಯ್ಯಾರರು ರಚಿಸಿದ ಅನೇಕ ಗದ್ಯ-ಪದ್ಯ ಕೃತಿಗಳು ಪ್ರಾಥಮಿಕ ಹಂತದಿಂದ ಹಿಡಿದು ವಿಶ್ವವಿದ್ಯಾಲಯದ ವರೆಗೆ ಪಠ್ಯಗಳಾಗಿವೆ. ಅದೇ ರೀತಿಯಲ್ಲಿ ತಾವೇ ರಚಿಸಿದ ಕೃತಿಗಳನ್ನು ವಿದ್ಯಾರ್ಥಿಗಳಿಗೆ ಪಾಠಮಾಡುವ ಅಪೂರ್ವ ಅವಕಾಶವೂ ಅವರಿಗೆ ಲಭಿಸಿತ್ತು. ವಾಚ್ಯ ಹಾಗೂ ಸೂಚ್ಯ ಎರಡೂ ಕೂಡಾ ಇವರ ಕಾವ್ಯದಲ್ಲಿದೆ. ಕಾವ್ಯ ವಾಚ್ಯವಾದಾಗ ಅದನ್ನು ಸೂಚ್ಯವಾಗಿಸುವವ ಸಹೃದಯಿ. ಗತಿಬದ್ಧವಾದದ್ದು ಕಾವ್ಯವಾದರೆ ಶ್ರುತಿಬದ್ಧವಾದದ್ದು ನಾದವಾಗಿದೆ. ಕಯ್ಯಾರರ ಕಾವ್ಯದಲ್ಲಿ ‘ವಯ್ಯಾರ’ವಿದೆಯೆಂದು ಧಾರ್ಮಿಕ ಮುಂದಾಳುವಾದ ಮುರಳೀಧರ ಯಾದವ್ ಅಭಿಪ್ರಾಯಪಡುತ್ತಾರೆ.

ಗಾಂಧೀಜಿಯವರ ಪ್ರಭಾವವು ಕಯ್ಯಾರರೊಳಗೆ ಹೋರಾಟದ ಕಿಚ್ಚನ್ನು ಸೃಷ್ಟಿಸಿ ಅದಕ್ಕಾಗಿ ಚಳವಳಿಗಳಲ್ಲಿ ತೊಡಗುವಂತೆ ಮಾಡಿತು. ಸ್ವಾತಂತ್ರ್ಯಕ್ಕಾಗಿ ಆ ಬಳಿಕ ಭಾಷೆ ಮತ್ತು ನೆಲ-ನೆಲೆಗಾಗಿ ಅವರು ನಡೆಸಿದ ಹೋರಾಟಗಳಿಗೆ ಲೆಕ್ಕವಿಟ್ಟವರ‍್ಯಾರು? ಮೊದಲು ರಾಷ್ಟ್ರಧ್ವನಿ. ಆ ಬಳಿಕ ರಾಜ್ಯಧ್ವನಿ. ಭಾಷಾವಾರು ಪ್ರಾಂತ್ಯ ರಚನೆಯಾಗಿ ಕಾಸರಗೋಡು ಕೇರಳಕ್ಕೆ ತಳ್ಳಲ್ಪಟ್ಟಾಗ ಅವರದ್ದು ಒಂಟಿ ಧ್ವನಿಯಾಯಿತು. ಮಂಗಳೂರಿನಲ್ಲಿ ಗಾಂಧೀಜಿಯವರನ್ನು ಕಂಡ ಬಳಿಕ ಖಾದಿ ತೊಡುವುದನ್ನು ರೈಗಳು ತಮ್ಮ ಜೀವನದ ಒಂದು ಭಾಗವನ್ನಾಗಿ ಮಾಡಿದರು. ಗಾಂಧೀಜಿಯವರು ಹಾಕಿಕೊಟ್ಟ ಹಾದಿಯಲ್ಲಿ ನಡೆಯುತ್ತಾ ಸೆರೆವಾಸ ಅನುಭವಿಸುತ್ತಿರುವಾಗಲೂ ಅವರ ಜತೆಯಲ್ಲಿದ್ದದ್ದು ಖಾದಿ ಉಡುಗೆ ಮಾತ್ರವಾಗಿದೆ. ಖಾದಿ ವಸ್ತ್ರ ಧರಿಸಿ ಶಾಲೆಗೆ ಬರುವ ಈ ಅಧ್ಯಾಪಕರು ಮಕ್ಕಳಿಗೆ ಹೆಚ್ಚು ಪ್ರೀತಿಪಾತ್ರರಾಗಿದ್ದರು. ಅವರು ಅತ್ಯುತ್ತಮ ಶಿಕ್ಷಕರಿಗಿರುವ ರಾಷ್ಟ್ರಪ್ರಶಸ್ತಿಯನ್ನು ರಾಷ್ಟ್ರಪತಿಗಳಿಂದ ಪಡೆಯುತ್ತಿರುವಾಗಲೂ ಕೂಡಾ ಖಾದಿ ಬಟ್ಟೆಯನ್ನೇ ಧರಿಸಿದ್ದರು. ಖಾದಿ ವಸ್ತ್ರವನ್ನುಡದೆ ಯಾವುದೇ ವೇದಿಕೆಯಲ್ಲೂ ಅವರು ಕಾಣಿಸಿಕೊಳ್ಳುತ್ತಿರಲಿಲ್ಲ. ಹೀಗೆ ಅವರು ತೀರಿಕೊಳ್ಳುವವರೆಗೂ ಖಾದಿ ಉಡುವುದನ್ನು ಒಂದು ವ್ರತದಂತೆ  ಸ್ವೀಕರಿಸಿದ್ದರು.

ಕಯ್ಯಾರರ ಬದುಕು ಮತ್ತು ಬರಹಗಳ ಬಗ್ಗೆ ಅಧ್ಯಯನ ನಡೆಸಿ ಮೂವರು ಪಿ.ಎಚ್.ಡಿ ಹಾಗೂ ಒಬ್ಬರು ಎಂ.ಫಿಲ್ ಪಡೆದುಕೊಂಡಿದ್ದಾರೆ. ಕರ್ನಾಟಕದ ಹಾಸನದವರಾದ ಪ್ರಾಚಾರ್ಯ ಶ್ರೀ ಹರಶಿವಮೂರ್ತಿಯವರು ಕಯ್ಯಾರರ ಸಮಗ್ರ ಸಾಹಿತ್ಯ ವಿಷಯದ ಮಹಾಪ್ರಬಂಧ ರಚಿಸಿ ಮೈಸೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪಡೆದಿದ್ದಾರೆ. ಹಾಗೆಯೇ ಉಜಿರೆಯ ಪ್ರಾಚಾರ್ಯ ಶ್ರೀನಾಥರು ಮುಂಬಯಿ ವಿಶ್ವವಿದ್ಯಾನಿಲಯದಿಂದ ಕಯ್ಯಾರರ ಸಮಗ್ರ ಸಾಹಿತ್ಯ ಜೀವನ ಕುರಿತು ಮಹಾಪ್ರಬಂದ ಬರೆದು ಡಾಕ್ಟರೇಟ್ ಪಡೆದಿದ್ದಾರೆ. ಹಾಗೆಯೇ ಮಂಗಳೂರು ಆಕಾಶವಾಣಿಯ ಪ್ರಸಾರ ನಿರ್ವಹಣಾಧಿಕಾರಿ ಸದಾನಂದ ಪೆರ್ಲ ಇವರೂ ಕೂಡಾ ಕಯ್ಯಾರರ  ಸಾಹಿತ್ಯದ ಕುರಿತು ಮಹಾಪ್ರಬಂಧ ಮಂಡಿಸಿ ಡಾಕ್ಟರೇಟ್ ಪಡೆದಿದ್ದಾರೆ. ಇವರು ಮಾತ್ರವಲ್ಲದೆ ಮಂಗಳೂರು ಕೆನರಾ ಕಾಲೇಜಿನ ಪ್ರಾಧ್ಯಾಪಿಕೆ ವಾಣಿಯವರು ಕಯ್ಯಾರರ ಸಾಹಿತ್ಯದ ಕುರಿತು ರಚಿಸಿದ ಮಹಾಪ್ರಬಂಧಕ್ಕೆ ಕಲ್ಲಿಕೋಟೆ  ವಿಶ್ವವಿದ್ಯಾನಿಲಯದಿಂದ ಎಂ.ಫಿಲ್ ಪದವಿ ಪಡೆದಿದ್ದಾರೆ. ಒಬ್ಬ ವ್ಯಕ್ತಿಯ ಸಾಹಿತ್ಯ ರಚನೆಯ ಕುರಿತು ಅದು ಕೂಡಾ  ಅವರ ಜೀವಿತಾವಧಿಯಲ್ಲಿಯೇ ಇಷ್ಟು ದೊಡ್ಡ ಪ್ರಮಾಣದಲ್ಲಿ ಪ್ರಬಂಧ ಮಂಡಿಸಲ್ಪಟ್ಟಿದ್ದು, ಇದೇ ಮೊದಲ ಸಲವೆಂದು ಹೇಳಬಹುದು.  ಇಂತಹ ಮಹಾನ್ ಸುಪುತ್ರನಿಗೆ ಜನ್ಮ ನೀಡಿದ  ಬದಿಯಡ್ಕದ ಮಣ್ಣು ಪಾವನವಾಯಿತು. ಹಾಗೆಯೇ ಇದು ಕಾಸರಗೋಡಿನ ಕನ್ನಡಿಗರಿಗೆ ಅಭಿಮಾನಪಡುವ ಸಂಗತಿಯೂ ಹೌದು.

ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದವರು ೨೦೧೩ ಜೂನ್ ೨೧ರಂದು ನಡೆಸಿದ ‘ಶತಮಾನದ ಕವಿಗೆ ಶತಮಾನದ ನಮನ’ ಎಂಬ ಕಾರ್ಯಕ್ರಮದಲ್ಲಿ ಕಯ್ಯಾರರ ಸುಪುತ್ರರಾದ ಪ್ರಸನ್ನ ರೈಯವರು ಮಾತನಾಡುತ್ತಾ ‘ತನ್ನ ತಂದೆಯವರು ಹುಟ್ಟಿದ್ದು, ಬೆಳೆದದ್ದು ಕಲ್ಲಕಳಯದಲ್ಲಿ. ಅವರೆಂದೂ ಕೂಡಾ ಕಯ್ಯಾರದಲ್ಲಿ ಇರಲೇ ಇಲ್ಲ. ಅವರನ್ನು ಕಲ್ಲಕಳಯ ಕಿಞ್ಞಣ್ಣ ರೈ ಎಂದೇ ಕರೆಯಬೇಕೆಂದು ಹೇಳಿದ್ದರು. ಇದು ಚಿಂತಿಸಬೇಕಾದ ವಿಷಯವಾಗಿದೆ. ತಮ್ಮ ಜೀವನದಲ್ಲಿ ‘ಸಹಸ್ರ ಚಂದ್ರ ದರ್ಶನ’ವನ್ನು ಕಂಡವರು ಕಯ್ಯಾರರು. ಅವರು ೮೦ನೇ ಹರೆಯಕ್ಕೆ ಕಾಲಿಟ್ಟಾಗ ತಮ್ಮ  ಜೀವನದಲ್ಲಿ ಪೂರ್ಣಚಂದ್ರನನ್ನು ಒಂದು ಸಾವಿರ ಬಾರಿ ವೀಕ್ಷಿಸಿದ್ದರು. ‘ಕನ್ನಡ ಶಕ್ತಿ’ಯಾಗಿ ‘ಗಡಿನಾಡಿನ ಕಿಡಿ’ಯಾಗಿ ಪ್ರಜ್ವಲಿಸಿದ ಕಯ್ಯಾರರ ಜೀವನದ ಅಭಿಲಾಷೆಯಾಗಿದ್ದ ಕಾಸರಗೋಡು ಕರ್ನಾಟಕಕ್ಕೆ ಸೇರಬೇಕೆಂಬ ವಿಚಾರಕ್ಕೆ ಕಾಸರಗೋಡು ಹಾಗೂ ಕರ್ನಾಟಕದ ರಾಜಕಾರಣಿಗಳು ಧ್ವನಿಸೇರಿಸಿ‘ಐಕ್ಯಗಾನ’ ಹಾಡದಿರುವುದು ಅವರ ನಿರಾಸೆಗೆ ಕಾರಣವಾಗಿತ್ತು. ಈ ವಿಷಯದಲ್ಲಿ ಅವರ ‘ಶ್ರೀಮುಖ’ವು ‘ಕೊರಗ’ದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಕಾಸರಗೋಡಿನ ಕನ್ನಡಿಗರದ್ದಾಗಿತ್ತು. ಆದರೆ ಕಾಸರಗೋಡಿನ ಕನ್ನಡಿಗರು ‘ವಿರಾಗಿ(ಣಿ)’ಗಳಂತೆ ಕುಳಿತುಬಿಟ್ಟದ್ದು ಮಾತ್ರ ಈ ನಾಡಿಗೆ ಶಾಪವಾಗಿ ಪರಿಣಮಿಸಿತು. ಕಯ್ಯಾರರು ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ‘ದುಡಿತವೇ ನನ್ನ ದೇವರು’ ಎಂದು ಹೇಳುತ್ತಾ ‘ಅನ್ನದೇವರ’ ಮುಂದೆ ಬೇರೆ ದೇವರು ಉಂಟೇ ಎಂದು ಕೇಳುತ್ತಾರೆ.

ನನ್ನನ್ನು ಹೆತ್ತ ತಾಯಿ ತುಳುವೆದಿ, ಎಷ್ಟೇ ಬಡವಳಾದರೂ, ಎಷ್ಟೇ ನಿಶಕ್ತಳಾದರೂ ಅವಳೇ ನನ್ನ ನಿಜ ಜನನಿ ಎಂದು ‘ಎನ್ನಪ್ಪೆ ತುಳುವಪ್ಪೆ’ಯ ಋಣ ದೊಡ್ಡದು ಎಂದು ಯಾವಾಗಲೂ ಸ್ಮರಣೆ ಮಾಡಿಕೊಳ್ಳುತ್ತಿದ್ದರು. ಕನ್ನಡ ‘ರತ್ನರಾಶಿ’ಯಲ್ಲಿ  ‘ಸಾರಸ್ವತ ಕಣ್ಮಣಿ’ಯಾಗಿದ್ದ ಹಿರಿಯ ‘ಚೇತನ’ವು ‘ಶತಮಾನದ ಗಾನ’ ಹಾಡುತ್ತಾ ಪೂರ್ಣಾಯುಶ್ಯ ಜೀವಿಸಿ ಅನಂತದಲ್ಲಿ ಲೀನವಾಗಿ ಹೋಗಿದೆ.

NO COMMENTS

LEAVE A REPLY