ಕೂಡ್ಲು ಬ್ಯಾಂಕ್ ದರೋಡೆಕೋರರ ಪತ್ತೆಗೆ ಪೊಲೀಸರ 3 ವಿಶೇಷ ತಂಡ

0
388

ಕಾಸರಗೋಡು: ಕೂಡ್ಲು ಸೇವಾ ಸಹಕಾರಿ ಬ್ಯಾಂಕ್‌ನಲ್ಲಿ ನಡೆದ ಬೃಹತ್ ದರೋಡೆ ಪ್ರಕರಣದ ಆರೋಪಿಗಳ ಪತ್ತೆಗಾಗಿ  ಡಿವೈಎಸ್ಪಿ ಟಿ.ಪಿ. ರಂಜಿತ್ ನೇತೃತ್ವದಲ್ಲಿ ಪೊಲೀಸರ ಮೂರು ವಿಶೇಷ ತನಿಖಾ ತಂಡವನ್ನು ರೂಪೀ ಕರಿಸಲಾಗಿದೆ. ಜಿಲ್ಲಾ ಪೊಲೀಸ್ ಅಧಿಕಾರಿ ಡಾ| ಎ. ಶ್ರೀನಿವಾಸ್ ತಂಡಗಳಿಗೆ ರೂಪುರೇಷೆ ನೀಡಿದ್ದು ವಿವಿಧೆಡೆಗಳಲ್ಲಿ ತನಿಖೆ ನಡೆಸಲಾಗುತ್ತಿದೆ.

ಈ ಪೈಕಿ ಒಂದು ತಂಡ ಕಳ್ಳರ ಜಾಡು ಹಿಡಿದು ಕರ್ನಾಟಕಕ್ಕೆ ತೆರಳಿ ವಿಸ್ತೃತ ತನಿಖೆ ನಡೆಸಲಾರಂಭಿಸಿದೆ. ಇನ್ನೊಂದು ತಂಡ ಕಾಸರಗೋಡು ಪರಿಸರದಲ್ಲಿ ತನಿಖೆಯ ಉಸ್ತುವಾರಿ ವಹಿಸಿಕೊಂಡಿದೆ. ಉಳಿದೊಂದು ತಂಡ ವೇಷಪಲ್ಲಟ ನಡೆಸಿ ಈ ಬಗ್ಗೆ ಮಾಹಿತಿ ಸಂಗ್ರಹಿಸಲಿದೆ.

ಬ್ಯಾಂಕ್‌ನೊಳಗೆ ನುಗ್ಗಿ ನಗ-ನಗದು ದರೋಡೆಗೈದ ನಾಲ್ವರು ಮುಸುಕುಧಾರಿಗಳಾಗಿದ್ದು, ಓರ್ವ ಹೊರಗೆ ಕಾಯುತ್ತಿದ್ದವ ಮುಸುಕು ಧರಿಸಿಲ್ಲವೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಈತನನ್ನು ಪ್ರತ್ಯಕ್ಷ ಕಂಡವ್ಯಕ್ತಿಗಳಿಂದ ಈತನ ಗುರುತು ಪತ್ತೆಹಚ್ಚಲು ಯತ್ನ ನಡೆಸಲಾಗು ತ್ತಿದೆ. ಈ ಹಿಂದೆ ವಿವಿಧ ಪ್ರಕರಣಗಳಲ್ಲಿ ಭಾಗಿಗಳಾಗಿದ್ದ ಐವರು ಆರೋಪಿಗಳ ಭಾವಚಿತ್ರವನ್ನು ಪ್ರತ್ಯಕ್ಷದರ್ಶಿಗಳಿಗೆ ತೋರಿಸಲಾಯಿತು. ಆದರೆ ಇವರ‍್ಯಾರೂ ಅಲ್ಲದಕಾರಣ ಪ್ರತ್ಯಕ್ಷದರ್ಶಿಗಳು ತಿಳಿಸಿದ ವಿವರವನ್ನು ಹೊಂದಿಕೊಂಡು ಆರೋಪಿಯ ರೇಖಾಚಿತ್ರ ತಯಾರಿಸಲಾಗುತ್ತಿದೆ.

ತನ್ಮಧ್ಯೆ ಎಡಿಜಿಪಿಯವರು ಕಳವು ನಡೆದ ಬ್ಯಾಂಕ್‌ಗೆ ಆಗಮಿಸಿ ತನಿಖೆ ನಡೆಸಿದರು. ಪೊಲೀಸರಿಗೆ ತನಿಖೆ ಕುರಿತು ಮಾರ್ಗದರ್ಶನ ನೀಡಿದರು.

ಬ್ಯಾಂಕ್‌ನಿಂದ ಕಳವುಗೈದ ೨೧ ಕೆ.ಜಿ ಚಿನ್ನವನ್ನು ಹೆಚ್ಚು ದೂರ ಕೊಂಡೊಯ್ಯದೆ ಪರಿಸರ ಪ್ರದೇಶದಲ್ಲೆಲ್ಲೋ ಅವಿತಿರಿಸಿರ ಬಹುದೆಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಐವರು ಕಳ್ಳರ ಪೈಕಿ ಓರ್ವ ಚಿನ್ನವನ್ನು ಕಾವಲು ಕಾಯುತ್ತಿರಬಹು ದೆಂದೂ ಈ ಬಗ್ಗೆ ಹೆಚ್ಚಿನ ಶೋಧ ನಡೆಸಲು ಪೊಲೀಸ್ ತಂಡ ಪ್ರಯತ್ನ ನಡೆಸುತ್ತಿದೆ. ಆದರೆ ಕಳವುಗೈದ ೧೨ ಲಕ್ಷ ರೂ.ಗಳನ್ನು ಈಗಾಗಲೇ ಹೊರಗೆ ಸಾಗಿಸಿರಬಹುದೆಂಬ ಗುಮಾನಿಯಿದೆ.

ಕಾಸರಗೋಡು-ಕುಂಬಳೆ ರಾ. ಹೆದ್ದಾರಿಯ ಎರಿಯಾಲ್‌ನಲ್ಲಿರುವ  ಕೂಡ್ಲು ಸೇವಾ ಸಹಕಾರಿ ಬ್ಯಾಂಕ್‌ಗೆ ಮೊನ್ನೆ ಅಪರಾಹ್ನ ೨.೧೫ರ ವೇಳೆ ನುಗ್ಗಿದ ತಂಡ ಸಿಬ್ಬಂದಿಗಳಿಗೆ ಚಾಕು ತೋರಿಸಿ, ಓರ್ವ ಸಿಬ್ಬಂದಿಯನ್ನು ಕಟ್ಟಿಹಾಕಿ ಭದ್ರತಾ ತಜೋರಿಯ ಕೀಲಿಕೈ ಕಸಿದು ಇದರೊಳ ಗಿದ್ದ ೨೧ ಕೆ.ಜಿ ಚಿನ್ನ ಹಾಗೂ ೧೨ ಲಕ್ಷ ರೂ.ಗಳನ್ನು ದೋಚಿ ಪರಾರಿಯಾಗಿತ್ತು. ಈ ಸಂದರ್ಭದಲ್ಲಿ ಅಡವು  ಇಡಲೆಂದು ತಂದ ಮಂಜತ್ತಡ್ಕದ ಖಮರುಭಾನು ಎಂಬವರ ೨೫ ಪವನ್ ಚಿನ್ನವನ್ನು ದರೋಡೆಕೋರರು ಕಸಿದೊಯ್ದಿದ್ದರು. ಬ್ಯಾಂಕ್‌ನಲ್ಲಿರಿಸಿದ ಚಿನ್ನ ಹಾಗೂ ಠೇವಣಿ ಇಟ್ಟ ಹಣ ಕಳೆದುಕೊಂಡ ನೂರಾರು ಗ್ರಾಹಕರು ಬ್ಯಾಂಕ್ ಮುಂದೆ ನಿನ್ನೆ ಜಮಾಯಿಸಿ, ಚಿನ್ನ, ಠೇವಣಿ ಹಣ ಹಿಂತಿರುಗಿಸಲು ಒತ್ತಾಯಿಸಿದರು.

ಈ ಪೈಕಿ ಕೆಲವರು ಬ್ಯಾಂಕ್‌ಗೆ ಕಲ್ಲು ತೂರಾಟ ನಡೆಸಿದರು.

NO COMMENTS

LEAVE A REPLY