ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿ ಕನ್ನಡತಿ ಎಂ.ಎಲ್. ಅಶ್ವಿನಿ

ಕಾಸರಗೋಡು: ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಜಿದ್ದಾಜಿದ್ದಿನ ತ್ರಿಕೋನ ಸ್ಪರ್ಧೆಗೆ ವೇದಿಕೆ ಸಜ್ಜಾಗಿದೆ. ಯಾರೂ ಕನಿಷ್ಠ ನಿರೀಕ್ಷಿಸದ ಅಚ್ಚರಿಯ ಆಯ್ಕೆ ಎಂಬಂತೆ ಬಿಜೆಪಿ ಈ ಬಾರಿ ಕಾಸರಗೋಡು ಲೋ ಕಸಭಾ ಕ್ಷೇತ್ರದಲ್ಲಿ ಕಾಸರಗೋಡು ಮಣ್ಣಿನ ಕನ್ನಡತಿ ಎಂ.ಎಲ್. ಅಶ್ವಿನಿ ಯವರನ್ನು ಎನ್‌ಡಿಎ ಉಮೇದ್ವಾ ರರಾಗಿ ಘೋಷಿಸಿದೆ. ಇದರಿಂದ ಕಾಸರಗೋಡಿನಲ್ಲಿ ಎನ್‌ಡಿಎ, ಯುಡಿಎಫ್ ಮತ್ತು  ಎಡರಂಗದ ನಡುವೆ ಪ್ರಬಲ ತ್ರಿಕೋನ ಸ್ಪರ್ಧೆ ಏರ್ಪಡುವಂತಾಗಿದೆ.

ಭಾಷಾ ಸಂಗಮ ಭೂಮಿಯಾದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ವರ್ಕಾಡಿ ಪಂಚಾಯತ್‌ನ ಪಜ್ವ ನಿವಾಸಿಯಾಗಿರುವ  ಶಶಿಧರ ಎಂಬವರ ಪತ್ನಿಯಾದ ಎಂ.ಎಲ್ ಅಶ್ವಿನಿಯವರು ಕಳೆದ ಬಾರಿ ಸ್ಥಳೀಯಾಡಳಿತ ಸಂಸ್ಥೆಗಳಿಗೆ   ನಡೆದ ಚುನಾವಣೆಯಲ್ಲಿ ಮಂಜೇಶ್ವರ ಬ್ಲೋಕ್ ಪಂಚಾಯತ್‌ನಲ್ಲಿ ೮೦೦ಕ್ಕಿಂತಲೂ ಹೆಚ್ಚು ಮತಗಳ ಅಂತರದಲ್ಲಿ ಗೆದ್ದು ಬ್ಲೋಕ್ ಪಂಚಾಯತ್ ಸದಸ್ಯೆಯಾಗಿ ಆಯ್ಕೆಗೊಂಡಿದ್ದರು. ಈಗ ಇವರು ಮಂಜೇಶ್ವರ ಬ್ಲೋಕ್   ಪಂಚಾಯತ್‌ನ ಆರ್ಥಿಕ ಸ್ಥಾಯಿ ಸಮಿತಿಯ ಸದಸ್ಯರೂ ಆಗಿದ್ದಾರೆ.  ಕನ್ನಡದ ಹೊರತಾಗಿ ತುಳು, ಮಲಯಾಳಂ, ಇಂಗ್ಲಿಷ್, ಹಿಂದಿ, ತಮಿಳು ಮೊದಲಾದ ಭಾಷೆಗಳಲ್ಲೂ ಪಾರಂಗತರಾಗಿರುವ ಅಶ್ವಿನಿಯವರು ಡಿಪ್ಲೊಮಾ ಇನ್ ಮಾಂಟೆಸ್ಸರಿ, ಡಿಪ್ಲೊಮಾ ಇನ್ ಅಕೌಂಟಿಂಗ್ ಶಿಕ್ಷಣ ಹೊಂದಿದ್ದಾರೆ. ಈ ಹಿಂದೆ ಅಲ್ಪ ಕಾಲ ಅಧ್ಯಾಪಿಕೆಯಾಗಿಯೂ ಸೇವೆ ಸಲ್ಲಿಸಿದ್ದರು.

ಭಾರತೀಯ ಮಹಿಳಾ ಮೋ ರ್ಚಾದ ಕರ್ನಾಟಕ ರಾಜ್ಯದ ಸಹಪ್ರಬಾರಿ, ತೆಲಂಗಾನ ರಾಜ್ಯಕ್ಕೆ ನಡೆದ ಚುನಾವಣೆಯಲ್ಲಿ ವಿಶೇಷ ಉಸ್ತುವಾರಿ ಎಂಬ ನೆಲೆಯಲ್ಲೂ ಈ ಹಿಂದೆ ಕಾರ್ಯವೆಸಗಿದ್ದರು. ಮಾತ್ರವಲ್ಲ ಜಮ್ಮು-ಕಾಶ್ಮೀರದಿಂದ ಆರಂಭಗೊಂಡು ಕನ್ಯಾಕುಮಾರಿ ತನಕದ ಭಾರತದ ಹಲವು ರಾಜ್ಯಗಳಿಗೂ ಯಾತ್ರೆ ನಡೆಸಿ ವಾರಗಳ ತನಕ ಹಲವು ಮತಗಟ್ಟೆಗಳಲ್ಲಿ ಉಳಿದುಕೊಂಡು ಬಿಜೆಪಿಯನ್ನು  ಕಟ್ಟಿ ಬೆಳೆಸುವ ರೀತಿಯ ಸೇವೆಯನ್ನು ನಿರ್ವಹಿಸಿದ್ದಾರೆ. ಇದರ ಅಂಗವಾಗಿ ಇವರು ೧೮ ರಾಜ್ಯಗಳಿಗೂ ಸಂದರ್ಶಿಸಿದ್ದಾರೆ. ಮಾತ್ರವಲ್ಲ ಉತ್ತರ ಪ್ರದೇಶ ಸರಕಾರ ಅಲ್ಲಿ ಜ್ಯಾರಿಗೊಳಿಸಿರುವ ಅಭಿವೃದ್ಧಿ ಯೋಜನೆಗಳ ಬಗ್ಗೆ ಅಧ್ಯಯನ ನಡೆಸಲು ಜಿಲ್ಲೆಯಿಂದ ಅಲ್ಲಿಗೆ ಸಂದರ್ಶಿಸಿದ ತಂಡದಲ್ಲೂ ಇವರು ಒಳಗೊಂಡಿದ್ದರು.

ಈ ತನಕ ಎಡರಂಗ ಮತ್ತು ಐಕ್ಯರಂಗಕ್ಕೆ ಮಾತ್ರವೇ ಸದಾ ಒಲಿಯುತ್ತಾ ಬಂದಿರುವ ಕಾಸರ ಗೋಡು ಲೋಕಸಭಾ ಕ್ಷೇತ್ರದಲ್ಲಿ ಆ ಬಾರಿಯ ಗೆಲುವನ್ನು ಎನ್‌ಡಿಎ ತೆಕ್ಕೆಗೆ ಸೆಳೆಯುವ ಭಗೀರಥ ಪ್ರಯತ್ನದಲ್ಲಿ ಅಶ್ವಿನಿಯವರು ಈಗಲೇ ಸಕ್ರಿಯವಾಗಿ ತೊಡಗಿದ್ದಾರೆ. ಮಾತ್ರವಲ್ಲ ಈ ಕ್ಷೇತ್ರದಲ್ಲಿ ಬಿಜೆಪಿಗೆ ಚೊಚ್ಚಲ ಗೆಲುವು ಲಭಿಸಲಿದೆ ಎಂಬ ತುಂಬು ನಿರೀಕ್ಷೆಯನ್ನು ಅವರು ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page