ಬಾಲಕಿಗೆ ಲೈಂಗಿಕ ಕಿರುಕುಳ: ಆರೋಪಿಗೆ ಒಂಭತ್ತೂವರೆ ವರ್ಷ ಕಠಿಣ ಸಜೆ, ಜುಲ್ಮಾನೆ

0
166

ಕಾಸರಗೋಡು: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ಪ್ರಥಮ)ದ ನ್ಯಾಯಾಧೀಶರಾದ ಸಾನು ಎಸ್. ಪಣಿಕ್ಕರ್ ಮೂರು ಸೆಕ್ಷನ್‌ಗಳಲ್ಲಾಗಿ ಒಟ್ಟು ಒಂಭತ್ತೂವರೆ ವರ್ಷ ಕಠಿಣ ಸಜೆ ಮತ್ತು ಏಳೂವರೆ ಸಾವಿರ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ.

 ಹೊಸದುರ್ಗ ತಾಲೂಕಿನ ತಾಯನ್ನೂರು ಕುಟ್ಯಡ್ಕ ತೋಟತ್ತಿಲ್ ಕರಿಂದಲನ್ ಅಲಿಯಾಸ್ ಕರುಣನ್(೫೩) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಅತ್ಯಾಚಾರ  ಸೆಕ್ಷನ್ ಪ್ರಕಾರ ಆರೋಪಿಗೆ ೭ ವರ್ಷ ಕಠಿಣ ಸಜೆ ಮತ್ತು ಐದು ಸಾವಿರ ರೂ. ಜುಲ್ಮಾನೆ, ಮನೆಗೆ ಅಕ್ರಮವಾಗಿ ಪ್ರವೇಶಿಸಿದ ಸೆಕ್ಷನ್ ಪ್ರಕಾರ ಎರಡು ವರ್ಷ ಕಠಿಣ ಸಜೆ ಮತ್ತು ಎರಡು ಸಾವಿರ ರೂ. ಜುಲ್ಮಾನೆ, ಬೆದರಿಕೆಯೊಡ್ಡಿದ ಸೆಕ್ಷನ್ ಪ್ರಕಾರ ಆರು ತಿಂಗಳ ಸಜೆ ಮತ್ತು ೫೦೦ ರೂ. ಜುಲ್ಮಾನೆ ಸೇರಿದಂತೆ ಒಟ್ಟು ಒಂಭತ್ತೂವರೆ ವರ್ಷ ಸಜೆ ಮತ್ತು ಜುಲ್ಮಾನೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ  ೬ ತಿಂಗಳು ೧೦ ದಿನ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ ಎಂದೂ ಶಿಕ್ಷೆಯನ್ನು ಒಟ್ಟಿಗೆ ಅನುಭವಿಸಿದರೆ ಸಾಕೆಂದು ತೀರ್ಪಿನಲ್ಲಿ ತಿಳಿಸಲಾಗಿದೆ.  ಅಂಬಲತ್ತರ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಪ್ರದೇಶದ ೧೪ರ ಹರೆಯದ ವಿದ್ಯಾರ್ಥಿನಿಗೆ ೨೦೧೧ ಜನವರಿ ೨೬ರಿಂದ ೨೦೧೨ ನವೆಂಬರ್ ೬ರ ನಡುವಿನ ಹಲವು ದಿನಗಳಲ್ಲಾಗಿ ಕಿರುಕುಳ ನೀಡಲಾಗಿದೆ. ಬಾಲಕಿಯ ಮನೆಯಲ್ಲಿ ಯಾರೂ ಇಲ್ಲದ ವೇಳೆ  ಆರೋಪಿ ಮನೆಗೆ ಅಕ್ರಮವಾಗಿ ಪ್ರವೇಶಿಸಿ ಹಲವು ಬಾರಿ ಲೈಂಗಿಕ ಕಿರುಕುಳ ನೀಡಿರುವುದಾಗಿ ಅಂಬಲತ್ತರ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ದೋಷಾರೋಪ ಪಟ್ಟಿಯಲ್ಲಿ ತಿಳಿಸಿದ್ದರು. ಲೈಂಗಿಕ ಕಿರುಕುಳಕ್ಕೊಳಗಾದ ಬಾಲಕಿ ಶಾಲೆಗೆ ಸರಿಯಾಗಿ ಬಾರದಿರುವುದನ್ನು ಗಮನಿಸಿದ ಅಧ್ಯಾಪಕರು ಆಕೆಯಲ್ಲ್ಲಿ ಕಾರಣ ಕೇಳಿದಾಗ ಆಕೆ ನಡೆದ ವಿಷಯವನ್ನು ಅಧ್ಯಾಪಕರಲ್ಲಿ ತಿಳಿಸಿದ್ದಳು. ಅದರಂತೆ ಅಧ್ಯಾಪಕರು ನೀಡಿದ ಮಾಹಿತಿಯಂತೆ ಚೈಲ್ಡ್ ಲೈನ್ ಅಧಿಕೃತರು ಬಾಲಕಿಯಿಂದ ಮಾಹಿತಿ ಸಂಗ್ರಹಿಸಿ ಆ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಅಂಬಲತ್ತರ ಪೊಲೀಸರು  ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.  ಪ್ರೋಸಿಕ್ಯೂಶನ್ ಪರವಾಗಿ ಮಾಜಿ ಹೆಚ್ಚುವರಿ ಪಬ್ಲಿಕ್ ಪ್ರೋಸಿಕ್ಯೂಟರ್ ಸುಧೀರ್ ಮೇಲೋತ್ ನ್ಯಾಯಾಲಯದಲ್ಲಿ ವಾದಿಸಿದ್ದರು.

NO COMMENTS

LEAVE A REPLY