ಸಂಸತ್ ಕಲಾಪ ವೇಳೆ ಕುಸಿದು ಬಿದ್ದ ಮಾಜಿ ಕೇಂದ್ರ ಸಚಿವ ಇ. ಅಹಮ್ಮದ್ ನಿಧನ

0
65

ಹೊಸದಿಲ್ಲಿ: ಸಂಸತ್ ಕಲಾಪ ವೇಳೆ ನಿನ್ನೆ ಬೆಳಿಗ್ಗೆ ಹೃದಯಾಘಾತದಿಂದಾಗಿ ಕುಸಿದು ಬಿದ್ದು ಅಸ್ವಸ್ಥರಾಗಿದ್ದ ಕೇರಳದ ಸಂಸದ, ಮಾಜಿ ಕೇಂದ್ರಸಚಿವರೂ, ಮುಸ್ಲಿಂ ಲೀಗ್‌ನ ರಾಷ್ಟ್ರೀಯ ಅಧ್ಯಕ್ಷರೂ ಆದ ಇ. ಅಹಮ್ಮದ್ ನಿಧನಹೊಂದಿದರು.

ಕುಸಿದು ಬಿದ್ದ ತಕ್ಷಣ ಅವರನ್ನು  ಸಮೀಪದ ಆಸ್ಪತ್ರೆಗೆ ತಲುಪಿಸಿ ಚಿಕಿತ್ಸೆ ನೀಡದ್ದು, ಅನಂತರ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ  ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ೨.೧೫ರ ವೇಳ ಅವರು ನಿಧನರಾಗಿದ್ದಾರೆ.

೨೦೧೭ರ ವಿತ್ತೀಯ ಬಜೆಟ್ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಪ್ರಸಕ್ತ ವರ್ಷದ ಆರ್ಥಿಕ ಸಮೀಕ್ಷೆಯನ್ನು ಮಂಡಿಸಲು ನಿನ್ನೆ ವಿಶೇಷ ಅಧಿವೇಶನ ಕರೆದಿತ್ತು. ಈ ಹಿನ್ನೆಲೆಯಲ್ಲಿ ಅಹಮ್ಮದ್ ಕಲಾಪಕ್ಕೆ ಹಾಜರಾಗಿದ್ದರು. ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಉಭಯ ಸದನಗಳನ್ನುದ್ದೇಶಿಸಿ ಬಜೆಟ್ ಪೂರ್ವಭಾಷಣ ಮಾಡುತ್ತಿರುವಾಗಲೇ ಇ. ಅಹಮ್ಮದ್ ಕುಸಿದುಬಿದ್ದು ಅಸ್ವಸ್ಥರಾಗಿದ್ದರು.

ಮೃತದೇಹವನ್ನು ದೆಹಲಿಯ ಅಧಿಕೃತ ವಸತಿಯಲ್ಲಿ ಸಾರ್ವಜನಿಕ ದರ್ಶನಕ್ಕಿರಿಸಲಾಗಿದೆ. ಅಪರಾಹ್ನ ೨ ಗಂಟೆಗೆ ವಿಶೇಷ ವಿಮಾನದಲ್ಲಿ ಮೃತದೇಹವನ್ನು ಕರಿಪ್ಪೂರ್‌ಗೆ ತರಲಾಗುವುದು.  ಸಂಜೆ ಕರಿಪ್ಪೂರ್ ಹಜ್ ಹೌಸ್‌ನಲ್ಲೂ, ಬಳಿಕ ಕಲ್ಲಿಕೋಟೆ ಲೀಗ್ ಹೌಸ್‌ನಲ್ಲಿ ಸಾರ್ವಜನಿಕ ದರ್ಶನಕ್ಕಿರಿಸಲಾಗು ವುದು. ರಾತ್ರಿ ವೇಳೆ ಕಣ್ಣೂರಿಗೆ ತಲುಪಿ ನಾಳೆ ಅಂತ್ಯಸಂಸ್ಕಾರ ನಡೆಯಲಿದೆ. ೨೫ ವರ್ಷ ಕಾಲ ಲೋಕಸಭಾ ಸದಸ್ಯ, ೧೮ ವರ್ಷ ವಿಧಾನಸಭಾ ಸದಸ್ಯನಾಗಿದ್ದರು. ೧೯೬೭, ೭೭, ೮೦, ೮೨, ೮೭ಎಂಬೀ ವರ್ಷಗಳಲ್ಲಿ ಕೇರಳ ವಿಧಾನಸಭೆಗೆ ಇ. ಅಹಮ್ಮದ್ ಚುನಾಯಿತರಾಗಿದ್ದಾರೆ. ೧೯೮೨ರಿಂದ ಐದು ವರ್ಷ ಕಾಲ ಕೈಗಾರಿಕಾ ಖಾತೆ ಸಚಿವರಾಗಿದ್ದರು. ೧೯೯೧, ೯೬, ೯೮, ೯೯, ೨೦೦೪, ೨೦೦೯, ೨೦೧೪ ಎಂಬೀ ವರ್ಷಗಳಲ್ಲಿ ಲೋಕಸಭೆಗೆ ಚುನಾಯಿತರಾಗಿದ್ದಾರೆ. ೨೦೧೪ರಲ್ಲಿ ಮಲಪ್ಪುರದಿಂದ ೧.೯೪ ಲಕ್ಷ ಮತಗಳ ಬಹುಮತದೊಂದಿಗೆ ಗೆಲುವು ಸಾಧಿಸಿ ಸಂಸದನಾಗಿದ್ದಾರೆ.

೨೦೦೪ರಲ್ಲಿ ಮೊದಲ ಯುಪಿಎ ಸರಕಾರದಲ್ಲಿ ವಿದೇಶಾಂಗ  ಖಾತೆ ಸಹಸಚಿವರಾಗಿದ್ದರು. ದ್ವಿತೀಯ ಯುಪಿಎ ಸರಕಾರದಲ್ಲಿ ರೈಲ್ವೇ, ವಿದೇಶಾಂಗ, ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆಗಳಲ್ಲಿ ಸಹಸಚಿವನಾಗಿದ್ದರು. ಅತೀ ಹೆಚ್ಚು ಕಾಲ ಕೇಂದ್ರ ಸಚಿವರಾದ ಕೇರಳೀಯರೆಂಬ ದಾಖಲೆಯೂ ಇವರಿಗೆ ಸಲ್ಲುತ್ತದೆ. ಸಂಸತ್‌ನ ಹಲವು ಸಮಿತಿಗಳಲ್ಲೂ ಇವರು ಪ್ರಧಾನ ಪಾತ್ರ ವಹಿಸಿದ್ದಾರೆ.  ೧೯೯೧ರಿಂದ ೨೦೧೪ರ ವರೆಗಿನ ವಿವಿಧ ಕಾಲಾವಧಿಯಲ್ಲಿ ವಿಶ್ವಸಂಸ್ಥೆಯ ಸಮಾವೇಶ ಹಾಗೂ ಇನ್ನಿತರ ಕಾರ್ಯಕ್ರಮಗಳಲ್ಲಿ ಭಾರತವನ್ನು ಪ್ರತಿನಿಧೀಕರಿಸಿ ಪಾಲ್ಗೊಂಡಿದ್ದರು. ಕಣ್ಣೂರು ನಗರಸಭಾಧ್ಯಕ್ಷ ಸ್ಥಾನವನ್ನು ಇವರು ವಹಿಸಿಕೊಂಡಿದ್ದರು.

ಭಾರತದ ಪ್ರತಿನಿಧಿಯಾಗಿ ಅಂತಾರಾಷ್ಟ್ರ ಮಟ್ಟದಲ್ಲಿ ಸೌಹಾರ್ದತೆ ಸೃಷ್ಟಿಸಲು ಪ್ರಯತ್ನಪಟ್ಟಿದ್ದಾರೆ.  ಮಾಜಿ ಪ್ರಧಾನಿ ಇಂದಿರಾಗಾಂಧಿಯವರ  ಪ್ರತಿನಿಧಿಯಾಗಿ ನಡೆಸಿದ ವಿದೇಶ ಸಂದರ್ಶನದಿಂದ ಗಲ್ಫ್ ಆಡಳಿತಾಧಿಕಾರಿಗಳೊಂದಿಗೆ ಹತ್ತಿರದ ಸಂಬಂಧ ಕಾಯ್ದಿರಿಸಲು ಸಾಧ್ಯವಾಯಿತು. ೨೦೦೪ರಲ್ಲಿ ಇರಾಕ್‌ನಲ್ಲಿ ಭಾರತೀಯರನ್ನು ದಿಗ್ಬಂಧನದಲ್ಲಿಸಿದ್ದಾಗ ಮಧ್ಯಪ್ರವೇಶಿಸಿ ಅವರ ಬಿಡುಗಡೆಗೆ ಯತ್ನಿಸಿದ್ದರು. ಸೌದಿ ಆಡಳಿತ ಒಕ್ಕೂಟದ ಅತಿಥಿಯಾಗಿ ಭಾರತದಿಂದ ತೆರಳುವ ಹಜ್ ಸೌಹಾರ್ದ ತಂಡದ ಸದಸ್ಯನಾಗಿದ್ದರು.

ತಲಶ್ಶೇರಿ ಬ್ರಣ್ಣನ್ ಕಾಲೇಜು, ತಿರುವನಂತಪುರ ಲಾ ಕಾಲೇಜು ಎಂಬಿಡೆಗಳಲ್ಲಿ ಶಿಕ್ಷಣ ಪಡೆದಿದ್ದರು. ಇಂಗ್ಲಿಷ್ ಹಾಗೂ ಮಲೆಯಾಳದಲ್ಲಿ ನಾಲ್ಕು ಪುಸ್ತಕಗಳನ್ನು ರಚಿಸಿದ್ದಾರೆ. ೧೯೩೮ ಎಪ್ರಿಲ್ ೨೯ರಂದು ಕಣ್ಣೂರಿನ ವ್ಯಾಪಾರಿ ಕುಟುಂಬದಲ್ಲಿ  ಅಬ್ದುಲ್ ಖಾದರ್ ಹಾಜಿ-ನಫೀಸ ಬೀವಿ ದಂಪತಿಯ  ದ್ವಿತೀಯ ಪುತ್ರನಾಗಿ ಎಡಪ್ಪಗತ್ತ್ ಅಹಮ್ಮದ್ ಯಾನೆ ಇ. ಅಹಮ್ಮದ್ ಜನಿಸಿದ್ದಾರೆ.

ಕಾನೂನು ಪದವಿ ಪಡೆದಿದ್ದರೂ ಆ ರಂಗದಲ್ಲಿ ದುಡಿಯದೆ ಪೂರ್ಣ ಸಮಯವನ್ನು ರಾಜಕೀಯ ಚಟುವಟಿಕೆಗೆ ಮೀಸಲಿರಿಸಿದ್ದರು. ಇವರ ಪತ್ನಿ ಸುಹರಾ  ಅಹಮ್ಮದ್ ೧೯೯೯ರಲ್ಲಿ  ಕಾರು ಅಪಘಾತದಲ್ಲಿ ಮೃತಪಟ್ಟಿದ್ದರು.  ಮೃತರು ಮಕ್ಕಳಾದ ರಯೀಸ್ ಅಹಮ್ಮದ್, ನಸೀರ್ ಅಹಮ್ಮದ್, ಡಾ| ಫೌಸಿಯ, ಅಳಿಯ-ಸೊಸೆಯಂದಿರಾದ ನಿಶಾಂರಯೀಸ್, ನೌಶೀನ್ ನಸೀರ್, ಡಾ| ಬಾಬು   ಮೊದಲಾದವರನ್ನು ಅಗಲಿದ್ದಾರೆ.

NO COMMENTS

LEAVE A REPLY