ಚಿನ್ನ ವ್ಯಾಪಾರಿ ಕೊಲೆ: ಇನ್ನೋರ್ವ ಆರೋಪಿ ಬಂಧನ

0
59

ಕಾಸರಗೋಡು: ವಿದ್ಯಾನಗರ ಚೆಟ್ಟುಂಗುಳಿ ನಿವಾಸಿ ಚಿನ್ನ  ವ್ಯಾಪಾರಿ ಯಾದ ಮೊಹಮ್ಮದ್ ಮನ್ಸೂರ್‌ರನ್ನು ಕೊಲೆಗೈದು ಮೃತದೇಹವನ್ನು ಪಾಳು ಬಾವಿಗೆ ಎಸೆದ ಪ್ರಕರಣದಲ್ಲಿ ಮುಖ್ಯ ಆರೋಪಿಗಳ ಪೈಕಿ ಇನ್ನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡು ಅತ್ತಾಣಿ ಅಗ್ರಹಾರ ಕುಡಿಯಿರುಪ್ಪು ಪುದುಕೋಟೆ ನಿವಾಸಿಯೂ ಬಾಯಾರು ಬಳಿಯ ಪೆರ್ವಾಡಿಯಲ್ಲಿ ವಾಸಿಸುತ್ತಿದ್ದ ಮೊಹಮ್ಮದ್ ಅಶ್ರಫ್ ಯಾನೆ ಮಾರಿಮುತ್ತು ಯಾನೆ ಶ್ರೀಧರನ್(೪೦) ಎಂಬಾತ ಸೆರೆಗೀಡಾದ ಆರೋಪಿಯಾಗಿ ದ್ದಾನೆ. ಕೇರಳ-ಕರ್ನಾಟಕ ಗಡಿಪ್ರದೇಶ ವಾದ ತಲಪಾಡಿಯಿಂದ ಈತನನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಜನವರಿ ೨೫ರಂದು ಮೊಹಮ್ಮದ್ ಮನ್ಸೂರ್‌ರ ಕೊಲೆ ಪ್ರಕರಣ ನಡೆದಿದೆ. ಇದೀಗ ಸೆರೆಗೀಡಾದ ಮೊಹಮ್ಮದ್ ಅಶ್ರಫ್ ಹಾಗೂ ಕುರುವಪ್ಪಾಡಿ ಮಿತ್ತನಡ್ಕ ಪದ್ಯಾಣ ಹೌಸ್‌ನ ಅಬ್ದುಲ್ ಸಲಾಂ ಎಂಬಿವರು ಈ ಪ್ರಕರಣದ ಆರೋಪಿಗಳಾಗಿದ್ದಾರೆ. ಈ ಪೈಕಿ ಅಬ್ದುಲ್ ಸಲಾಂನನ್ನು ಘಟನೆ ಒಂದು ವಾರದೊಳಗೆ ಬಂಧಿಸಲಾಗಿದೆ. ತಲೆಮರೆಸಿಕೊಂಡಿದ್ದ ಮೊಹಮ್ಮದ್ ಅಶ್ರಫ್‌ನನ್ನು ಹುಡುಕಿ ತನಿಖಾ ತಂಡ ತಮಿಳುನಾಡಿಗೆ ತೆರಳಿತ್ತು. ಆತನ ಮನೆ ಪತ್ತೆಹಚ್ಚಿದ ತನಿಖಾ ತಂಡ ಆ ಪರಿಸರದಲ್ಲಿ ಶೋಧ ನಡೆಸುತ್ತಿರುವುದನ್ನು ತಿಳಿದ ಆರೋಪಿ ಅಲ್ಲಿಂದ ತಪ್ಪಿಸಿಕೊಂಡು ಮರಳಿ ಕೇರಳಕ್ಕೆ ಬಂದಿದ್ದನು. ಆತನ ಆಗುಹೋಗುಗಳನ್ನು ನಿರೀಕ್ಷಿಸುತ್ತಿದ್ದ  ತನಿಖಾ ತಂಡ ನಿನ್ನೆ ಆತನನ್ನು ತಲಪಾಡಿಯಿಂದ ಬಂಧಿಸಿದೆ. ಇದೀಗ ಆತ ಪೊಲೀಸರ ಕಸ್ಟಡಿಯಲ್ಲಿದ್ದು ತನಿಖೆಗೊಳಪಡಿಸಿದ ಬಳಿಕ ನ್ಯಾಯಾಲಯದಲ್ಲಿ ಹಾಜರುಪಡಿ ಲಾಗುವುದು.

ಇದೇ ವೇಳೆ ಈ ಹಿಂದೆ ಸೆರೆಗೀಡಾಗಿ ಇದೀಗ ರಿಮಾಂಡ್‌ನಲ್ಲಿರುವ ಆರೋಪಿ ಅಬ್ದುಲ್ ಸಲಾಂನನ್ನು ಕಸ್ಟಡಿಗೆ ಪಡೆಯಲು ಹಾಗೂ ಕೊಲೆಗೆ ಬಳಸಿದ ಆಯುಧಗಳನ್ನು ಪತ್ತೆಹಚ್ಚಲು ಪೊಲೀಸರು ಕ್ರಮ ಆರಂಭಿಸಿದ್ದಾರೆ. ಹಳೆಯ ಚಿನ್ನ ಮಾರಾಟಕ್ಕಿದೆಯೆಂದು ತಿಳಿಸಿ ಮೊಹಮ್ಮದ್ ಮನ್ಸೂರ್‌ರನ್ನು ಉಪಾಯದಿಂದ ಬಾಯಾರಿಗೆ ಕರೆಸಿಕೊಂಡ ಆರೋಪಿಗಳು ಅಲ್ಲಿಂದ ಓಮ್ನಿ ವ್ಯಾನ್‌ನಲ್ಲಿ  ಮುಳಿಗದ್ದೆ ಬಳಿಯ ಚಕ್ಕರೆಗುಳಿಗೆ ತಲುಪಿಸಿ ಕಣ್ಣಿಗೆ ಮೆಣಸಿನ ಹುಡಿ ಎರಚಿ ತಲೆಗೆ ಹೊಡೆದು ಕೊಲೆಗೈದು ಮೃತದೇಹವನ್ನು ಅಲ್ಲಿನ ಪಾಳುಬಾವಿಗೆ ಎಸೆದಿದ್ದರು.

NO COMMENTS

LEAVE A REPLY