ಖಾಲಿಯಾ ರಫೀಕ್ನನ್ನು ಗುಂಡಿಕ್ಕಿ ಕಡಿದು ಕೊಲೆ

0
134

ಮಂಜೇಶ್ವರ: ಕೊಲೆ ಸಹಿತ ಹಲವು ಪ್ರಕರಣಗಳಲ್ಲಿ ಆರೋಪಿಯಾದ ಉಪ್ಪಳ ಬಪ್ಪಾಯಿತೊಟ್ಟಿ ನಿವಾಸಿ ಖಾಲಿಯಾ ರಫೀಕ್(೩೮) ಕೊಲೆಗೈಯ್ಯಲ್ಪಟ್ಟನು.

ರಾಷ್ಟ್ರೀಯ ಹೆದ್ದಾರಿಯಲ್ಲಿ ತಲಪ್ಪಾಡಿ ಬಳಿಯ ಕೋಟೆಕಾರು ಜಂಕ್ಷನ್‌ನಿಂದ ೧೦೦ ಮೀಟರ್ ದೂರದಲ್ಲಿರುವ ಪೆಟ್ರೋಲ್ ಬಂಕ್‌ನ ಮುಂಭಾಗದಲ್ಲಿ ತಂಡ ಗುಂಡಿಕ್ಕಿ ಬಳಿಕ ಮಾರಕಾಯುಧಗಳಿಂದ ಕಡಿದು ಖಾಲಿಯಾ ರಫೀಕ್‌ನನ್ನು ಕೊಲೆಗೈದಿದೆ. ನಿನ್ನೆ ರಾತ್ರಿ ೧೨.೧೫ರ ವೇಳೆ ಈ ಘಟನೆ ನಡೆದಿದೆ. ಖಾಲಿಯಾ ರಫೀಕ್ ಹಾಗೂ ಸ್ನೇಹಿತ ಮಣಿಮುಂಡದ ಮೊಹಮ್ಮದ್ ಸಾಹಿದ್(೨೯) ರಿಟ್ಸ್ ಕಾರಿನಲ್ಲಿ ಮಂಗಳೂರಿಗೆ ತೆರಳುತ್ತಿದ್ದಾಗ ಎದುರು ಭಾಗದಿಂದ ಬಂದ ಟಿಪ್ಪರ್ ಲಾರಿಯನ್ನು ಕಾರಿಗೆ ಢಿಕ್ಕಿಹೊಡೆಸಲಾಗಿದೆ. ಈ ವೇಳೆ ಕಾರಿನಿಂದಿಳಿದು ಖಾಲಿಯಾ ರಫೀಕ್ ಹಾಗೂ ಮೊಹಮ್ಮದ್ ಸಾಹಿದ್ ಪೆಟ್ರೋಲ್ ಬಂಕ್ ಭಾಗಕ್ಕೆ ಓಡಿದ್ದು ಅಷ್ಟರಲ್ಲಿ ಲಾರಿಯಲ್ಲಿದ್ದ ತಂಡ ಅವರ ಮೇಲೆ ಗುಂಡು ಹಾರಿಸಿದೆ. ಗುಂಡು ತಗಲಿ ಇಬ್ಬರೂ ಬಿದ್ದಿದ್ದು ಕೂಡಲೇ ತಲುಪಿದ ತಂಡ ಮಾರಕಾಯುಧಗಳಿಂದ ಖಾಲಿಯಾ ರಫೀಕ್‌ನನ್ನು  ಕಡಿದು ಕೊಲೆಗೈದು  ಪರಾರಿಯಾಗಿದೆ.

ಕೂಡಲೇ ಸ್ಥಳಕ್ಕೆ ತಲುಪಿದ ಉಳ್ಳಾಲ ಪೊಲೀಸರ ನೇತೃತ್ವದಲ್ಲಿ ಮೃತದೇಹ ಹಾಗೂ ಗಾಯಾಳುವನ್ನು ದೇರಳಕಟ್ಟೆ ಆಸ್ಪತ್ರೆಗೆ ಸಾಗಿಸಲಾಗಿದೆ. ತಂಡದ ಆಕ್ರಮಣದಿಂದ ಗಾಯಗೊಂಡಿರುವ ಮೊಹಮ್ಮದ್ ಸಾಹಿದ್ ದೇರಳಕಟ್ಟೆಯ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ. ಖಾಲಿಯಾ ರಫೀಕ್‌ನ ಮೃತದೇಹವನ್ನು ದೇರಳಕಟ್ಟೆ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಘಟನೆ ನಡೆದ ಸ್ಥಳದಲ್ಲಿ ಪೊಲೀಸರು ಬಂದೋಬಸ್ತು ಏರ್ಪಡಿಸಿದ್ದಾರೆ. ಮಂಗಳೂರು ಡಿಸಿಪಿ ಸಂಜೀವ್ ಕುಮಾರ್, ಕಮಿಶನರ್ ಚಂದ್ರಶೇಖರ, ಉಳ್ಳಾಲ ಠಾಣೆ ಇನ್‌ಸ್ಪೆಕ್ಟರ್ ಗೋಪಿಕೃಷ್ಣ ಮೊದಲಾದವರು ಸ್ಥಳಕ್ಕೆ ತಲುಪಿ ಸ್ಥಿತಿಗತಿಗಳನ್ನು ಪರಿಶೀಲಿಸಿದ್ದಾರೆ. ಮಂಜೇಶ್ವರ ಪೊಲೀಸರು ಸ್ಥಳಕ್ಕೆ ತಲುಪಿದ್ದಾರೆ. ಘಟನೆ ಕುರಿತು ಉಳ್ಳಾಲ ಹಾಗೂ ಮಂಜೇಶ್ವರ ಪೊಲೀಸರು ಮಾತುಕತೆ ನಡೆಸಿದ್ದಾರೆ.

ಖಾಲಿಯಾ ರಫೀಕ್‌ನ ಕೊಲೆ ಕೃತ್ಯದಲ್ಲಿ ಆರು ಮಂದಿ ತಂಡ ಭಾಗಿಯಾಗಿರುವುದಾಗಿ ಮಂಜೇಶ್ವರ ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಖಾಲಿಯಾ ರಫೀಕ್ ಹಾಗೂ ಸ್ನೇಹಿತ ಮೊಹಮ್ಮದ್ ಸಾಹಿದ್ ಕಾರಿನಲ್ಲಿ ಮಂಗಳೂರು ಭಾಗಕ್ಕೆ ತೆರಳುತ್ತಿದ್ದಂತೆ ಎದುರು ಭಾಗದಿಂದ ಬಂದ ಟಿಪ್ಪರ್ ಲಾರಿ ಹಾಗೂ ಕಾರಿನಲ್ಲಿದ್ದ ತಂಡ ಆಕ್ರಮಣ ನಡೆಸಿದೆ. ಲಾರಿಯಲ್ಲಿ ಇಬ್ಬರು, ಕಾರಿನಲ್ಲಿ ೪ ಮಂದಿ ಇದ್ದರು. ಖಾಲಿಯಾ ರಫೀಕ್ ಸಂಚರಿಸುತ್ತಿದ್ದ ಕಾರು ಕೋಟೆಕಾರು ಬಳಿಯ ಪೆಟ್ರೋಲ್ ಬಂಕ್‌ಗೆ ತಲುಪುತ್ತಿದ್ದಂತೆ ಟಿಪ್ಪರ್ ಲಾರಿಯನ್ನು ಕಾರಿಗೆ ಢಿಕ್ಕಿ ಹೊಡೆಸಿದ್ದು ಬಳಿಕ ಕಾರಿನಲ್ಲಿದ್ದ ತಂಡ ಗುಂಡು ಹಾರಿಸಿದೆ. ಈ ವೇಳೆ ಖಾಲಿಯಾ ರಫೀಕ್ ನೆಲಕ್ಕೆ ಬಿದ್ದಾಗ ಕಾರಿನಲ್ಲಿದ್ದವರು ಅಲ್ಲಿಗೆ ತಲುಪಿದ್ದಾರೆ. ಈ ಆರು ಮಂದಿಯ ತಂಡದಲ್ಲಿ ಈ ಹಿಂದೆ ಕೊಲೆಗೀಡಾದ ವ್ಯಕ್ತಿಯ ಸಂಬಂಧಿಕನೂ ಇದ್ದಾನೆಂದೂ ಅವನೇ ಇದೀಗ ಖಾಲಿಯಾ ರಫೀಕ್‌ನ ಕೊಲೆಗೆ ನೇತೃತ್ವ ನೀಡಿದ್ದಾನೆಂದು ಪೊಲೀಸರಿಗೆ ಮಾಹಿತಿ ಲಭಿಸಿದೆ. ದೇರಳಕಟ್ಟೆಯ ಆಸ್ಪತ್ರೆಯಲ್ಲಿ ದಾಖಲಾಗಿರುವ ಮೊಹಮ್ಮದ್ ಸಾಹಿದ್‌ನಿಂದ ಮಂಜೇಶ್ವರ ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದು ಈ ವೇಳೆ ಈ ಮಹತ್ತರ ಸುಳಿವು ಲಭಿಸಿದೆ.

ಕೊಲೆಗೆ ಕಾರಣ ಗೂಂಡಾ ತಂಡಗಳೊಳಗಿನ ದ್ವೇಷ

ಮಂಜೇಶ್ವರ: ಖಾಲಿಯಾ ರಫೀಕ್‌ನನ್ನು ಕೊಲೆಗೈಯ್ಯಲು ಕಾರಣ ಗೂಂಡಾ ತಂಡಗಳೊಳಗಿನ ದ್ವೇಷವೇ ಆಗಿದೆಯೆಂದೂ ಪೊಲೀಸರು ತಿಳಿಸುತ್ತಿದ್ದಾರೆ. ಉಪ್ಪಳ ಕೇಂದ್ರೀಕರಿಸಿ ಗೂಂಡಾ ತಂಡಗಳು ಕಾರ್ಯಾಚರಿಸುತ್ತಿರುವುದಾಗಿ ಈ ಹಿಂದೆ ನಡೆದ ಹಲವು ಪ್ರಕರಣಗಳಿಂದ ಪೊಲೀಸರು ತಿಳಿದುಕೊಂಡಿದ್ದರು. ಗೂಂಡಾ ತಂಡಗಳ ಮಧ್ಯೆ ಪದೇ ಪದೇ ಆಕ್ರಮಣ ಪ್ರತ್ಯಾಕ್ರಮಣ ನಡೆಯುತ್ತಿತ್ತು. ೨೦೧೫ ಡಿಸೆಂಬರ್ ೩೦ರಂದು ರಾತ್ರಿಯೂ ಖಾಲಿಯಾ ರಫೀಕ್‌ನ ಮೇಲೆ ಕೊಲೆಯತ್ನ ನಡೆದಿತ್ತು. ಈತ ಸಂಚರಿಸುತ್ತಿದ್ದ ಕಾರಿನ ಮೇಲೆ ಇನ್ನೊಂದು ಗೂಂಡಾ ತಂಡ ಉಪ್ಪಳ-ಕೈಕಂಬ ರಸ್ತೆಯಲ್ಲಿ ಗುಂಡು ಹಾರಿಸಿದೆ. ಈ ವೇಳೆ ಖಾಲಿಯಾ ರಫೀಕ್  ವ್ಯಾಗನರ್ ಕಾರಿನಲ್ಲಿ ಸಂಚರಿಸುತ್ತಿದ್ದನು. ಈ ಪ್ರಕರಣದಲ್ಲಿ ಖಾಲಿಯಾ ರಫೀಕ್ ಹಾಗೂ ಇನ್ನೊಂದು ತಂಡದ ಗೂಂಡಾನನ್ನು ಪೊಲೀಸರು ಬಂಧಿಸಿದ್ದರು. ಹೀಗೆ ಬಂಧಿತನಾದ ಖಾಲಿಯಾ ರಫೀಕ್ ಜೈಲಿನಲ್ಲಿದ್ದು ಕೆಲವು ತಿಂಗಳ ಹಿಂದೆಯಷ್ಟೇ ಬಿಡುಗಡೆಗೊಂಡಿದ್ದನು. ಅನಂತರ ಯಾವುದೇ ಆಕ್ರಮಣ ಬಗ್ಗೆ ದೂರುಂಟಾಗಿರಲಿಲ್ಲ. ಇದೀಗ ನಿನ್ನೆ ರಾತ್ರಿ ನಡೆದ ಆಕ್ರಮಣದಲ್ಲಿ ಖಾಲಿಯಾ ರಫೀಕ್ ಕೊಲೆಗೀಡಾಗಿದ್ದಾನೆ.

NO COMMENTS

LEAVE A REPLY