ದಾಳಿ ನಡೆಸಿದ ಅಬಕಾರಿ ತಂಡದ ಮೇಲೆ ಆಕ್ರಮಣ: ಇಬ್ಬರಿಗೆ ಗಾಯ

0
50

ಕುಂಬಳೆ: ಮನೆಯಲ್ಲಿ ಮದ್ಯ ಬಚ್ಚಿಟ್ಟು ಮಾರಾಟ ಗೈಯ್ಯಲಾಗುತ್ತಿದೆಯೆಂಬ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳ ಮೇಲೆ ತಂಡವೊಂದು ಆಕ್ರಮಣ ನಡೆಸಿದೆ. ಆಕ್ರಮಣಕ್ಕೆ ಅಬಕಾರಿ ಇನ್‌ಸ್ಪೆಕ್ಟರ್ ಸಹಿತ ಇಬ್ಬರು ಗಾಯಗೊಂಡಿದ್ದಾರೆ.

ಇದೇ ವೇಳೆ ಸೆರೆಗೀಡಾದ ತಂಡವನ್ನು ಬಲಪ್ರಯೋಗಿಸಿ ಬಿಡುಗಡೆಗೊಳಿಸಲಾಗಿದೆ.

ನಿನ್ನೆ ರಾತ್ರಿ ಬಂದ್ಯೋಡು ಬಳಿಯ ಬೇಕೂರು ಎಂಬಲ್ಲಿ ಘಟನೆ ನಡೆದಿದೆ. ಆಕ್ರಮಣದಲ್ಲಿ ಗಾಯಗೊಂಡ ಕುಂಬಳೆ ಅಬಕಾರಿ ಇನ್‌ಸ್ಪೆಕ್ಟರ್ ರೋಬಿನ್ ಬಾಬು (೫೦), ಸಿವಿಲ್ ಎಕ್ಸೈಸ್ ಆಫೀಸರ್ ಶ್ರೀಕಾಂತ್ (೩೫) ಎಂಬಿವರನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಬೇಕೂರು ಸಂತೋಷ್‌ನಗರದ ರಾಜೇಶ್ ಎಂಬಾತನ ಮನೆಯಲ್ಲಿ ನಡೆಸಿದ ದಾಳಿಯಲ್ಲಿ ಮನೆಗೆ ಹಾಗೂ ಬೈಕ್‌ನಲ್ಲಿ ಮದ್ಯ ಬಚ್ಚಿಟ್ಟಿರುವುದು ಪತ್ತೆಯಾಗಿದೆ. ಇದನ್ನು ವಶಪಡಿಸಿಕೊಳ್ಳಲಾಗಿದೆ. ಇದೇ ವೇಳೆ ಮದ್ಯ ಸೇವಿಸಲು ತಲುಪಿದ್ದ ಹದಿನೈದರಷ್ಟು ಮಂದಿ ಅಬಕಾರಿ ಅಧಿಕಾರಿಗಳ ಮೇಲೆ ಆಕ್ರಮಣ ನಡೆಸಿದ್ದಾರೆಂದು ದೂರಲಾಗಿದೆ. ಅನಂತರ ಸೆರೆಗೀಡಾದ ಆರೋಪಿಗಳನ್ನು ತಂಡ ಬಲಪ್ರಯೋಗಿಸಿ ಬಿಡುಗಡೆಗೊಳಿಸಿದೆ.

ಮನೆಯಲ್ಲಿ ಐದು ಪೆಟ್ಟಿಗೆ ಮದ್ಯ ಬಚ್ಚಿಟ್ಟಿದ್ದರೂ ಒಂದು ಪೆಟ್ಟಿಗೆ ಮದ್ಯ ಮಾತ್ರವೇ ವಶಪಡಿಸಿಕೊಳ್ಳಲಾಗಿದೆಯೆಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಇನ್‌ಸ್ಪೆಕ್ಟರ್ ರೋಬಿನ್ ಬಾಬು ಹಾಗೂ ಶ್ರೀಕಾಂತ್‌ರಿಗೆ ಆಕ್ರಮಿಸಿದ ಬಳಿಕ ನಾಲ್ಕು ಪೆಟ್ಟಿಗೆ ಮದ್ಯವನ್ನು ತಂಡ ಆಟೋ ರಿಕ್ಷಾದಲ್ಲಿ ಸಾಗಿಸಿದೆ.

ಅಬಕಾರಿ ಅಧಿಕಾರಿಗಳ ಮೇಲೆ ಆಕ್ರಮಣವುಂಟಾದ ಬಗ್ಗೆ ವಿಷಯ ತಿಳಿದು ಮಂಜೇಶ್ವರ, ಕುಂಬಳೆಯಿಂದ ಪೊಲೀಸರು ತಲುಪಿದರೂ ಆರೋಪಿಗಳನ್ನು ಸೆರೆಹಿಡಿಯಲು ಸಾಧ್ಯವಾಗಲಿಲ್ಲ. ಆರೋಪಿಗಳಿಗಾಗಿ ವ್ಯಾಪಕ ಶೋಧ ನಡೆಸಲಾಗುತ್ತಿದೆ.  ಈಮಧ್ಯೆ ಆರೋಪಿಗಳಲ್ಲೋರ್ವ ಕಸ್ಟಡಿಗೊಳಗಾದ ಬಗ್ಗೆ ಸೂಚನೆಯಿದೆ.

ಮದ್ಯ ಬಚ್ಚಿಟ್ಟ ಮನೆಯಿಂದ ನಿಷೇಧಿತ ಪಾನ್‌ಮಸಾಲೆಯನ್ನು ವಶಪಡಿಸಲಾಗಿದೆಯೆಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಸಂಬಂಧ ಪ್ರದೀಪ್, ರಾಜೇಶ್ ಎಂಬಿವರ ಸಹಿತ ೧೦ ಮಂದಿ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

NO COMMENTS

LEAVE A REPLY