ಕಳ್ಳ ಸಾಗಾಟ: ೧.೨೨ ಕೋಟಿ ರೂ.ಗಳ ಚಿನ್ನ ಪತ್ತೆ ತಳಂಗರೆ ನಿವಾಸಿ ಸೇರಿದಂತೆ ಇಬ್ಬರ ಸೆರೆ

0
38

ಕಾಸರಗೋಡು: ವಿದೇಶದಿಂದ ಅಕ್ರಮವಾಗಿ ತರಲಾದ ೧.೨೨ ಕೋಟಿ ರೂ.ಗಳ ಚಿನ್ನವನ್ನು ಕರಿಪೂರ್‌ನಲ್ಲಿರುವ ಕಲ್ಲಿಕೋಟೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕಸ್ಟಮ್ಸ್ ತಂಡ ಪತ್ತೆ ಹಚ್ಚಿ ವಶಪಡಿಸಿಕೊಂಡಿದೆ.

ಈ ಸಂಬಂಧ ಕಾಸರಗೋಡು ತಳಂಗರೆ ತೆರುವತ್‌ನ ಟಿ.ಎ. ನೌಶಾದ್ (೨೮) ಕಲ್ಲಿಕೋಟೆ ತಾಮರಶ್ಶೇರಿ ವೀಟಿಲ್ ಮಹಮ್ಮದ್ ರಾಫಿ (೨೪) ಎಂಬವರನ್ನು ಸೆರೆ ಹಿಡಿಯಲಾಗಿದೆ.

ಇವರಿಂದ ೪.೩ ಕಿಲೋ ಗ್ರಾಂ ಚಿನ್ನ ವಶಪಡಿಸಲಾಗಿದೆ. ಈ ಇಬ್ಬರು ದುಬಾಯಿಂದ ಮಸ್ಕತ್ ಮೂಲಕ ಒಮಾನ್ ಏರ್ ವಿಮಾನದಲ್ಲಿ ನಿನ್ನೆ ಮುಂಜಾನೆ ೪ ಗಂಟೆಗೆ ಕರಿಪ್ಪೂರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದರು. ಆ ವೇಳೆ ಇವರು ಅಕ್ರಮವಾಗಿ ಚಿನ್ನ ಕಳ್ಳಸಾಗಾಟ ಮಾಡುತ್ತಿರುವ ಬಗ್ಗೆ ಗುಪ್ತ ಮಾಹಿತಿ ಲಭಿಸಿತ್ತು. ಕಲ್ಲಿಕೋಟೆ ಪ್ರಿವೆಂಟೀವ್ ಕಸ್ಟಮ್ಸ್ ವಿಭಾಗದ ತಂಡ ತಕ್ಷಣ ವಿಮಾನ ನಿಲ್ದಾಣಕ್ಕೆ ಆಗಮಿಸಿ ವಿಮಾನ ನಿಲ್ದಾಣದ ಏರ್ ಕಸ್ಟಮ್ಸ್ ಇಂಟೆಲಿಜೆನ್ಸ್ ವಿಭಾಗದ ಸಹಾಯದೊಂದಿಗೆ ಆಗಮಿಸಿದ ನೌಶಾದ್ ಮತ್ತು ಮಹಮ್ಮದ್‌ರ ಬ್ಯಾಗುಗಳನ್ನು ತಪಾಸಣೆಗೊಳಪಡಿಸಿದ್ದಾರೆ. ನೌಶಾದ್‌ನ ಬ್ಯಾಗ್‌ನಲ್ಲಿ ವಾಟರ್ ಪಂಪ್ ಮೋಟಾರು ಪತ್ತೆಯಾಗಿದೆ. ಅದರೊಳಗೆ ಚಿನ್ನ ಪತ್ತೆಯಾಗಿ ದೆ. ಮಹಮ್ಮದ್ ರಫೀಕ್‌ನ ಬ್ಯಾಗನ್ನು ತಪಾಸಣೆಗೊಳಪಡಿಸಿದಾಗ, ಕಾರು ವಾಶರ್ ಪತ್ತೆಯಾಗಿದೆ. ಅದರಲ್ಲಿ  ಕ್ಲೀನರ್‌ನಲ್ಲಿ ವೆಲ್ಡ್ ಮಾಡಿ ಇರಿಸಿದ ಸ್ಥಿತಿಯಲ್ಲಿ ೨.೨೭೮ ಕಿಲೋ ಚಿನ್ನ ಪತ್ತೆಯಾಗಿದೆ.

ತಕ್ಷಣ ಅವರಿಬ್ಬರನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ವಶಪಡಿ ಸಲಾದ ಚಿನ್ನಕ್ಕೆ ಭಾರತದಲ್ಲಿ ೧,೨೨,೧೬,೦೦೦ ರೂ. ಮೌಲ್ಯ ಹೊಂದಿದೆ.

ಇದೇ ಸಂದರ್ಭದಲ್ಲಿ ತಾವು ಗಲ್ಫ್‌ನಲ್ಲಿ ಪರಿಚಯಗೊಂಡ ಕಾಸರಗೋಡು ಮತ್ತು ಕಲ್ಲಿಕೋಟೆಯ ನಿವಾಸಿಗಳಿಬ್ಬರು  ತಮ್ಮ ಕೈಗೆ ಈ ಚಿನ್ನ ನೀಡಿದರೆಂದು, ಕಳ್ಳಸಾಗಾಟದ ಮೂಲಕ ಚಿನ್ನವನ್ನು ಕಲ್ಲಿಕೋಟೆಗೆ ಸಾಗಿಸಿದ್ದಲ್ಲಿ  ಪ್ರತಿಫಲವಾಗಿ ಊರಿಗೆ ಹಿಂತಿರುಗಲು ಉಚಿತ ವಿಮಾನ ಟಿಕೆಟ್ ಮತ್ತು ೫೦,೦೦೦ ರೂ.  ನೀಡುವುದಾಗಿಯೂ ಕಲ್ಲಿಕೋಟೆ ವಿಮಾನ ನಿಲ್ದಾಣಕ್ಕೆ ಆಗಮಿಸುವ ತಂಡದ ಸದಸ್ಯರಿಗೆ ಈ ಚಿನ್ನ ಹಸ್ತಾಂತರಿಸುವಂತೆ ಅವರು ತಮ್ಮಲ್ಲಿ ತಿಳಿಸಿದ್ದರೆಂದು ಬಂಧಿತರು ಕಸ್ಟಮ್ಸ್ ಅಧಿಕಾರಿಗಳಲ್ಲಿ ಹೇಳಿಕೆ ನೀಡಿದ್ದಾರೆ. ಆ ಹಿನ್ನೆಲೆಯಲ್ಲಿ ಬಂಧಿತರು ಕೇವಲ ಚಿನ್ನ ಕಳ್ಳಸಾಗಾಟ ಕೊಂಡಿಗಳಾಗಿದ್ದರೆಂದು ಅಧಿಕಾರಿಗಳು  ತಿಳಿಸಿದ್ದಾರೆ.

NO COMMENTS

LEAVE A REPLY