ಅಬ್ದುಲ್ ಸಲಾಂ ಹತ್ಯೆ: ಆರು ಮಂದಿ ಆರೋಪಿಗಳ ಬಂಧನ

0
92

ಕುಂಬಳೆ: ಮೊಗ್ರಾಲ್ ಬಳಿಯ ಪೇರಾಲ್ ಪಟ್ಟೋರಿಮೂಲೆ ನಿವಾಸಿ ಎಂ.ಎ. ಮೊಹಮ್ಮದ್ ಕುಂಞಿ ಹಾಜಿಯವರ ಪುತ್ರ ಅಬ್ದುಲ್ ಸಲಾಂ (೨೨)ರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಆರೋಪಿಗಳನ್ನು ಕುಂಬಳೆ ಸಿಐ ವಿ.ವಿ. ಮನೋಜ್, ಎಸ್.ಐ. ಜಯಶಂಕರ ನೇತೃತ್ವದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಬದ್ರಿಯಾ ನಗರ ನಿವಾಸಿ ಅಬೂಬಕರ್ ಸಿದ್ದಿಕ್ ಯಾನೆ ಮಾಂಙಮುಡಿ ಸಿದ್ದಿಕ್ (೩೯), ಪೇರಾಲ್ ನಿವಾಸಿ ಉಮ್ಮರ್ ಫಾರೂಕ್ ಕೆ.ಎಸ್ (೨೯), ಪೆರುವಾಡ್ ನಿವಾಸಿ ಸಹೀರ್ (೩೨), ಪೇರಾಲ್‌ನ ನಿಯಾಸ್ (೩೧), ಬಂಬ್ರಾಣ ಆರಿಕ್ಕಾಡಿಯ ಹರೀಶ್(೨೯), ಮಾಳಿಯಂಗರ ಕೋಟ ನಿವಾಸಿ ಲತೀಫ್ (೩೬) ಎಂಬವರು ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.

ಸೆರೆಗೀಡಾದ ಆರೋಪಿಗಳ ಪೈಕಿ ಅಬೂಬಕರ್ ಸಿದ್ದಿಕ್ ಯಾನೆ ಮಾಂಙಮುಡಿ ಸಿದ್ದಿಕ್ ಬಿ.ಎಂ.ಎಸ್ ಕಾರ್ಯಕರ್ತ  ಆಟೋ ಚಾಲಕ ದಯಾನಂದರ ಕೊಲೆ ಪ್ರಕರಣದಲ್ಲ್ಲಿ ಖುಲಾಸೆಗೊಳಿಸಲ್ಪಟ್ಟ ಆರೋಪಿಯಾ ಗಿದ್ದಾನೆ. ಅದೇರೀತಿ ಉಮ್ಮರ್ ಫಾರೂಕ್ ಕೆ.ಎಸ್ ಕುಂಬಳೆಯಲ್ಲಿ ಫುಟ್ಭಾಲ್ ಸಂಬಂಧ ವಿವಾದಕ್ಕೆ ಸಂಬಂಧಿಸಿ ಯುವಕನನ್ನು ಕೊಲೆಗೈದ ಪ್ರಕರಣದಲ್ಲೂ ಆರೋಪಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಅಬ್ದುಲ್ ಸಲಾಂ ಕೊಲೆ ಪ್ರಕರಣದಲ್ಲಿ ಒಟ್ಟು ೮ ಮಂದಿ ಆರೋಪಿಗಳಿದ್ದು, ಇವರನ್ನು ಇನ್ನಷ್ಟೇ ಬಂಧಿಸಬೇಕಾಗಿದೆ. ಅವರಿಗಾಗಿ ಶೋಧ ಮುಂದುವರಿಯುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕೊಲೆಗೆ ಆರೋಪಿಗಳು ಬಳಸಿದ ಎರಡು ಕತ್ತಿ ಹಾಗೂ ಒಂದು ತಲವಾರನ್ನು ಪತ್ತೆಹಚ್ಚಿ ವಶಪಡಿಸಿದ್ದು, ಅವುಗಳ ಪರಿಶೀಲನೆ ನಡೆಯುತ್ತಿದೆ.

ಕಳೆದ ಆದಿತ್ಯವಾರ ಸಂಜೆ ಮೊಗ್ರಾಲ್  ಮಾಳಿಯಂಗರ ಕೋಟದ ನಿರ್ಜನ ಹಿತ್ತಿಲಿನಲ್ಲಿ ಅಬ್ದುಲ್ ಸಲಾಂರನ್ನು ಹತ್ಯೆಗೈಯ್ಯಲಾಗಿದೆ. ಕುತ್ತಿಗೆ ಕೊಯ್ದು ಕೊಲೆಗೈದ ಬಳಿಕ ರುಂಡವನ್ನು ಸಮೀಪದಲ್ಲಿ ಎಸೆದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅಬ್ದುಲ್ ಸಲಾಂರ ಜತೆಗಿದ್ದ ನೌಶಾದ್‌ಗೆ ಇರಿದು ಗಂಭೀರ ಗಾಯಗೊಳಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮತ್ತಿಬ್ಬರು ಆಕ್ರಮಣದಿಂದ ಗಾಯಗೊಂಡಿದ್ದರು. ಅವರು ಲಿಖಿತವಾಗಿ ದೂರು ನೀಡಿಲ್ಲವೆನ್ನಲಾಗಿದೆ.

ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ ನೌಶಾದ್‌ನ ಹೇಳಿಕೆ ಪ್ರಕಾರ ೮ ಮಂದಿ ವಿರುದ್ಧ ಕೇಸು ದಾಖಲಿಸಿದ್ದು, ಈಪೈಕಿ ೬ ಮಂದಿಯನ್ನು ಬಂಧಿಸಲಾಗಿದೆ.  ಆರೋಪಿಗಳಪೈಕಿ ಅಬೂಬಕರ್  ಸಿದ್ದಿಕ್‌ನ ಮನೆಗೆ ಅಬ್ದುಲ್ ಸಲಾಂ ನುಗ್ಗಿ ತಾಯಿ ಸಹಿತ ಕುಟುಂಬದ ಮಹಿಳೆಯರನ್ನು ಅವಾಚ್ಯವಾಗಿ ನಿಂದಿಸಿ ಅವಹೇಳನಗೈದಿ ದ್ದನೆನ್ನಲಾಗಿದೆ.  ಇದೇ ದ್ವೇಷದಿಂದ ಬಳಿಕ ಅಬ್ದುಲ್ ಸಲಾಂರನ್ನು ನಿರ್ಜನ ಪ್ರದೇಶಕ್ಕೆ ಕರೆಸಿ ಕಡಿದು ಕೊಲೆಗೈದಿರುವುದಾಗಿ ತನಿಖೆಯಲ್ಲಿ ತಿಳಿದುಬಂದಿದೆಯೆಂದು  ಪೊಲೀಸರು ತಿಳಿಸಿದ್ದಾರೆ. ತಲೆಮರೆಸಿಕೊಂಡ ಇನ್ನಿಬ್ಬರು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸಿ ಕೊಲೆಪ್ರಕರಣದ ಇನ್ನಷ್ಟು ಮಾಹಿತಿ ಬಯಲುಗೊಳ್ಳಲಿದೆಯೆಂದು ಪೊಲೀಸರು ತಿಳಿಸಿದ್ದಾರೆ.

NO COMMENTS

LEAVE A REPLY