ಅಂಗಡಿಗೆ ಸಾಮಗ್ರಿ ಖರೀದಿಸಲು ಬಂದ ಬಾಲಕಿಗೆ ಲೈಂಗಿಕ : ಕಿರುಕುಳ: ಆರೋಪಿಗೆ 95 ವರ್ಷ ಕಠಿಣ ಸಜೆ, ಜುಲ್ಮಾನೆ
ಕಾಸರಗೋಡು: ಅಂಗಡಿಗೆ ಸಾಮಗ್ರಿ ಖರೀದಿಸಲು ಬಂದ 11ರ ಹರೆಯದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿಗೆ ಕಾಸರಗೋಡು ಫಾಸ್ಟ್ ಟ್ರಾಕ್ ಸ್ಪೆಷಲ್ ನ್ಯಾಯಾಲಯದ ನ್ಯಾಯಾ ಧೀಶರಾದ ರಾಮು ರಮೇಶ್ಚಂ ದ್ರಭಾನು ವಿವಿಧ ಸೆಕ್ಷನ್ಗಳಲ್ಲಾಗಿ ಒಟ್ಟು 95 ವರ್ಷ ಕಠಿಣ ಸಜೆ ಹಾಗೂ 3.75 ಲಕ್ಷ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ 15 ತಿಂಗಳ ಹೆಚ್ಚುವರಿ ಸಜೆ ಅನುಭವಿಸ ಬೇಕಾಗಿದೆಯೆಂದೂ ತೀರ್ಪಿನಲ್ಲಿ ತಿಳಿಸಲಾಗಿದೆ. ಅನ್ಷೀರ್ ಮೊಗ್ರಾಲ್ ನಾಂಗಿ ಕಡಪ್ಪುರದ ಅಬ್ದುಲ್ ರಹ್ಮಾನ್ ಅಲಿಯಾಸ್ ಅಂದಾಯಿ (59) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ.
2022 ಜೂನ್ 9 ಹಾಗೂ ಅದರ ಮೊದಲ ದಿನಗಳಲ್ಲಾಗಿ ಆರೋಪಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದನೆಂದೂ ಈ ಬಗ್ಗೆ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ದೋಷಾರೋಪಪಟ್ಟಿಯಲ್ಲಿ ಆರೋಪಿಸಲಾಗಿದೆ. ಆರೋಪಿ ಅಂಗಡಿಗೆ ಸಾಮಗ್ರಿ ಖರೀದಿಸಲು ಬಂದ ಬಾಲಕಿಗೆ ಆತ ಲೈಂಗಿಕ ಕಿರುಕುಳ ನೀಡಿದ್ದನೆಂದೂ, ಈ ವಿಷಯವನ್ನು ಯಾರಲ್ಲಾದರೂ ತಿಳಿಸಿದಲ್ಲಿ ಕೊಂದು ರೈಲ್ವೇ ಹಳಿಗೆ ಎಸೆಯಲಾಗುವುದೆಂದು ಆರೋಪಿ ಬಾಲಕಿಗೆ ಬೆದರಿಕೆಯೊಡ್ಡಿ ಬಳಿಕ ಹಲವು ಬಾರಿ ಆಕೆಗೆ ಕಿರುಕುಳ ನೀಡಿದ್ದನೆಂದು ದೋಷಾರೋಪ ಪಟ್ಟಿಯಲ್ಲಿ ಆರೋಪಿಸಲಾಗಿದೆ.
ಕುಂಬಳೆ ಪೊಲೀಸರು ಈ ಬಗ್ಗೆ ಪೋಕ್ಸೋ ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದರು. ಅಂದು ಕುಂಬಳೆ ಎಸ್ಐ ಆಗಿದ್ದ ವಿ.ಕೆ. ಅನೀಶ್ ಆರೋಪಿಯನ್ನು ಬಂಧಿಸಿದ್ದರು. ನಂತರ ಅಂದು ಕುಂಬಳೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆಗಿದ್ದ ಪಿ. ಪ್ರಮೋದ್ ಈ ಪ್ರಕರಣದ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪ್ರೋಸಿಕ್ಯೂಶನ್ ಪರ ಸ್ಪೆಷಲ್ ಪಬ್ಲಿಕ್ ಪ್ರೋಸಿಕ್ಯೂಟರ್ ಎ.ಕೆ. ಪ್ರಿಯ ನ್ಯಾಯಾಲಯದಲ್ಲಿ ವಾದಿಸಿದ್ದರು.