ಅಂಗನವಾಡಿ, ಮದ್ರಸ ಬಳಿ ಬೃಹತ್ ಮರದಿಂದ ಆತಂಕ
ಉಪ್ಪಳ: ಮಂಗಲ್ಪಾಡಿ ಪಂಚಾ ಯತ್ ವ್ಯಾಪ್ತಿಯ ಶಿರಿಯ ಬೀಚ್ ರಸ್ತೆ ಬದಿಯ ಬೃಹತ್ ಮರವೊಂದು ಇಲ್ಲಿ ಕಾರ್ಯಾಚರಿಸುತ್ತಿರುವ ಅಂಗನವಾಡಿ ಹಾಗೂ ಮದ್ರಸಾಕ್ಕೆ ಭೀತಿಯೊಡ್ಡುತ್ತಿದೆ. ಹಲವು ಬಾರಿ ಅಧಿಕಾರಿಗಳಿಗೆ ದೂರು ನೀಡಿದರೂ ತೆರವುಗೊಳಿಸುವ ಗಡು ಮಾತ್ರವೇ ನೀಡುತ್ತಿರುವುದಾಗಿ ಸ್ಥಳೀಯರು ದೂರಿದ್ದಾರೆ. ಈ ಬೃಹತ್ ಮರದ ರೆಂಬೆಗಳು ಗಾಳಿ, ಮಳೆಗೆ ಯಾವುದೇ ಕ್ಷಣದಲ್ಲಿ ಮುರಿದು ಬೀಳುವ ಸಾಧ್ಯತೆ ಹೆಚ್ಚಾಗಿದೆ. ಇದರಿಂದ ಇಲ್ಲಿ ಕಾರ್ಯಾಚರಿಸುತ್ತಿರುವ ಅಂಗನವಾಡಿ ಹಾಗೂ ಮದ್ರಸಾಕ್ಕೆ ತಲುಪುವ ಮಕ್ಕಳಲ್ಲಿ ಭಯ ಸೃಷ್ಟಿಯಾಗಿದೆ. ಅಂಗನವಾಡಿ ಕಾಂಕ್ರೀಟ್ ಕಟ್ಟಡದಲ್ಲಿ ಕಾರ್ಯಾ ಚರಿಸುತ್ತಿದ್ದು, ಎದುರು ಭಾಗಕ್ಕೆ ತಗಡು ಶೀಟನ್ನು ಹೊದಿಸಲಾಗಿದೆ. ಇದೇ ಪರಿಸರದಲ್ಲಿ ಹೆಂಚು ಹಾಸಿದ ಕಟ್ಟಡದಲ್ಲಿ ಮದ್ರಸ ಕಾರ್ಯಾಚರಿಸುತ್ತಿದೆ. ಮರದ ಒಣಗಿದ ರೆಂಬೆ ಪದೇ ಪದೇ ಕಟ್ಟಡದ ಮೇಲೆ ಬೀಳುತ್ತಿದೆ. ಮಳೆಗೆ ಯಾವುದೇ ಕ್ಷಣದಲ್ಲಿ ರೆಂಬೆಗಳು ಮುರಿದು ಬೀಳುವ ಆಂತಕ ಸ್ಥಳೀಯರನ್ನು ಕಾಡಿದೆ. ಅಲ್ಲದೆ ಇದೇ ಪರಿಸರದಲ್ಲಿ ಟ್ರಾನ್ಸ್ ಫಾರ್ಮರ್ ಕೂಡಾ ಇದ್ದು ದುರಂತದ ಭೀತಿ ಹೆಚ್ಚಿಸಿದೆ.
ಅಪಾಯಕ್ಕೆ ಕಾರಣವಾದ ಮರದ ರೆಂಬೆಗಳನ್ನು ತೆರವುಗೊಳಿಸಬೇಕೆಂದು ವರ್ಷಗಳ ಹಿಂದೆ ಊರವರು ಜಿಲ್ಲಾಧಿಕಾರಿ, ಮಂಗಲ್ಪಾಡಿ ಪಂಚಾ ಯತ್ ಸಹಿತ ವಿವಿಧ ಅಧಿಕಾರಿಗಳಿಗೆ ಮನವಿ ನೀಡಿದ್ದು, ಇದುವರೆಗೂ ಯಾವುದೇ ಕ್ರಮಕ್ಕೆ ಮುಂದಾಗಲಿ ಲ್ಲವೆಂದು ಊರವರು ತಿಳಿಸಿದ್ದಾರೆ. ಮೇ ತಿಂಗಳಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ತಲುಪಿ ನೋಡಿ ಅಳತೆ ಮಾಡಿ ಶೀಘ್ರ ತೆರವುಗೊಳಿಸುವುದಾಗಿ ತಿಳಿಸಿ ಹೋದವರು ಮರಳಿ ಬರಲಿಲ್ಲವೆಂದು ಸ್ಥಳೀಯರು ತಿಳಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಈ ಬಗ್ಗೆ ಕ್ರಮ ಕೈಗೊಳ್ಳಬೇಕಾಗಿದೆ.