ಅಕ್ಕಿಯಲ್ಲಿ ವಿಷಕಾರಿ ಆರ್ಸೆನಿಕ್ ವಸ್ತುಗಳ ಪ್ರಮಾಣ ಹೆಚ್ಚಳ: ಆರೋಗ್ಯಕ್ಕೆ ಹಾನಿಕರ

ತಿರುವನಂತಪುರ: ಭಾರತ ಮತ್ತು ಏಷ್ಯಾ ಖಂಡದ ಮನೆಗಳಲ್ಲಿ ಅನ್ನವು ಕೇವಲ ಆಹಾರ ಮಾತ್ರವಲ್ಲ, ಅದು ಸಂಸ್ಕೃತಿಯ ಒಂದು ಭಾಗವೂ ಆಗಿದೆ. ಇದೇ ಸಂದರ್ಭದಲ್ಲಿ ಅಕ್ಕಿಯ ಗುಣಮಟ್ಟದ ಬಗ್ಗೆ ಇತ್ತೀಚೆಗೆ ನಡೆಸಲಾದ ಸಂಶೋಧನೆಯಲ್ಲಿ ಅಕ್ಕಿಯಲ್ಲಿ ಆರ್ಸೆನಿಕ್‌ನಂತಹ ವಿಷಕಾರಿ ಅಂಶ ಪ್ರಮಾಣ ಹೆಚ್ಚುತ್ತಿದೆ ಎಂದು ಪತ್ತೆಹಚ್ಚಲಾಗಿದೆ. ಇದು ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗಳಿಗೆ ಕಾರಣವಾಗಬಹುದೆಂಬ ಮುನ್ನೆಚ್ಚರಿಕೆಯನ್ನೂ ನೀಡಲಾಗಿದೆ. ಈ ಸುದ್ಧಿ ಭಾರತಕ್ಕೆ ಮಾತ್ರವಲ್ಲ ಕೋಟ್ಯಂತರ ಮಂದಿಯ ಪ್ರಧಾನ ಆಹಾರವಾಗಿರುವ ಇಡೀ ಏಷ್ಯಾಕ್ಕೆ ಒಂದು ಗಂಭೀರ ಎಚ್ಚರಿಕೆಯಾಗಿದೆ.

ದಿ ಲ್ಯಾನ್ಸೆಟ್ ಪ್ಲಾನರೀ ಹೆಲ್ತ್ ಜರ್ನಲ್‌ನಲ್ಲಿ ಪ್ರಕಟವಾದ ಕೊಲಂಬಿಯಾ ವಿಶ್ವ ವಿದ್ಯಾಲಯದ ಈ ಅಧ್ಯಯನವು ವಿಜ್ಞಾನಿಗಳನ್ನು ಅಚ್ಚರಿಗೊಳಿಸಿದೆ. ಜಾಗತಿಕ ತಾಪಮಾನ ಮಟ್ಟ 2 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾಗುತ್ತಾ ಸಾಗಿದರೆ ಅದು ಮಣ್ಣಿನ ರಾಸಾಯನಿಕ ಗುಣ ಲಕ್ಷಣಗಳನ್ನು ಬದಲಿಸುವಂತೆ ಮಾಡುತ್ತದೆ. ಹೆಚ್ಚುತ್ತಿರುವ ಇಂಗಾಲದ ಡೈ ಆಕ್ಸೈಡ್‌ನ ಪ್ರಮಾಣ ಹೆಚ್ಚುತ್ತಾ ಹೋದಂತೆ ಇಂತಹ ಸಮಸ್ಯೆಯನ್ನು ಇನ್ನಷ್ಟು ಗಂಭೀರಗೊಳಿಸುತ್ತದೆ.

ಇದರ ಪರಿಣಾಮವಾಗಿ ಅಕ್ಕಿ ಧಾನ್ಯಗಳಲ್ಲಿ ಆರ್ಸೆನಿಕ್ ಮಟ್ಟ ಅಪಾಯಕಾರಿಯಾಗಿ ಹೆಚ್ಚುತ್ತಿದೆ. ಈ ವಿಷಕಾರಿ ವಸ್ತುವು ಕ್ಯಾನ್ಸರ್ ಮಾತ್ರವಲ್ಲದೆ, ಹೃದ್ರೋಗ ಮತ್ತು ಇತರ ಗಂಭೀರ ಆರೋಗ್ಯ ಸಮಸ್ಯೆಗಳಿಗೂ ದಾರಿ ಮಾಡಿಕೊಡಬಹುದೆಂದು ತಜ್ಞರು  ಹೇಳುತ್ತಿದ್ದಾರೆ. ಈ ಬೆದರಿಕೆಯನ್ನು ಎದುರಿಸಲು ವಿಜ್ಞಾನಿಗಳು ಈಗ ಹೊಸ ಮಾರ್ಗಗಳನ್ನು ಹುಡುಕುತ್ತಿದ್ದಾರೆ.

ಕಡಿಮೆ ಆರ್ಸೆನಿಕ್ ಹೀರಿಕೊಳ್ಳುವ ರೀತಿಯ ಹೊಸ ಅಕ್ಕಿ ತಳಿಯನ್ನು ಇದಕ್ಕಾಗಿ ಅಭಿವೃದ್ಧಿ ಪಡಿಸಬೇಕು. ಮಣ್ಣಿನಡಿಯಲ್ಲಿರುವ ವಿಷಕಾರಿ ವಸ್ತುವನ್ನು ಕಡಿಮೆ ಮಾಡುವ ಹೊಸ ಕೃಷಿ ತಂತ್ರಗಳನ್ನು ಬಳಸಬೇಕು. ಇದಲ್ಲದೆ ಅಕ್ಕಿಯನ್ನು ಚೆನ್ನಾಗಿ ತೊಳೆದು ಹೆಚ್ಚು ನೀರಿನಲ್ಲಿ ಬೇಯಿಸುವ ಮೂಲಕ ಆರ್ಸೆನಿಕ್ ಪ್ರಮಾಣವನ್ನು ಕಡಿಮೆ ಮಾಡಬಹುದೆಂಬ ಸಲಹೆಯನ್ನು ವಿಜ್ಞಾನಿಗಳು ನೀಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page