ಅಗಲಿದ ಪ್ರಸಿದ್ಧ ಮಲೆಯಾಳ ಸಾಹಿತಿ ಎಂ.ಟಿ. ವಾಸುದೇವನ್ ನಾಯರ್ರಿಗೆ ನಾಡಿನ ನಮನ
ಕಲ್ಲಿಕೋಟೆ: ಅಗಲಿದ ಪ್ರಸಿದ್ಧ ಮಲೆಯಾಳ ಸಾಹಿತಿ, ಚಲನಚಿತ್ರ ನಿರ್ದೇಶಕರೂ ಆಗಿರುವ ಎಂ.ಟಿ ವಾಸುದೇವನ್ ನಾಯರ್ (91)ರಿಗೆ ನಾಡಿನ ವಿವಿಧ ರಂಗಗಳ ಪ್ರಮುಖರ ಸಹಿತ ಹಲವರು ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ನಡಕ್ಕಾವು ಕೊಟ್ಟಾರಂ ರಸ್ತೆಯಲ್ಲಿರುವ ಸ್ವ-ಗೃಹದಲ್ಲಿ ಮೃತದೇ ವಿರಿಸಿದ್ದು, ಹಲವರು ಪ್ರಮುಖರು ತಲುಪಿ ಅಂತಿಮ ನಮನ ಸಲ್ಲಿಸಿದರು.
ವೃದ್ಧಾಪ್ಯ ಸಹಜ ಅಸೌಖ್ಯದಿಂದ ಬಳಲುತ್ತಿದ್ದ ಎಂ.ಟಿ. ವಾಸುದೇವನ್ ನಾಯರ್ ಅವರನ್ನು ಕಲ್ಲಿಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸ ಲಾಗಿತ್ತು. ನಿನ್ನೆ ರಾತ್ರಿ 10 ಗಂಟೆ ವೇಳೆ ನಿಧನ ಸಂಭವಿಸಿದೆ. ಸಾಹಿತಿಯೂ, ಚಿತ್ರಕತೆ ಲೇಖಕನೂ, ನಿರ್ದೇಶಕನೂ ಆಗಿದ್ದ ಎಂ.ಟಿ. ವಾಸುದೇವನ್ ನಾಯರ್ ಮಲೆಯಾಳ ಸಾಹಿತ್ಯವನ್ನು ಇಡೀ ಜಗತ್ತಿಗೆ ಪರಿಚಯಿಸಿದ ವ್ಯಕ್ತಿಗಳಲ್ಲೊಬ್ಬರಾಗಿದ್ದಾರೆ. ಮಲೆಯಾಳ ಸಾಹಿತ್ಯಕ್ಕೆ ನೀಡಿದ ಅಮೋಘ ಕೊಡುಗೆಯನ್ನು ಪರಿಗಣಿಸಿ 1995ರಲ್ಲಿ ಭಾರತ ಸರಕಾರ ಜ್ಞಾನಪೀಠ ಪುರಸ್ಕಾರ ನೀಡಿ ಗೌರವಿಸಿದೆ. 2005ರಲ್ಲಿ ಪದ್ಮಭೂಷಣ ಕೂಡಾ ಲಭಿಸಿದೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ, ಕೇರಳ ಸಾಹಿತ್ಯ ಅಕಾಡೆಮಿ ಪುರಸ್ಕಾರ, ವಯಲಾರ್ ಅವಾರ್ಡ್ ಸಹಿತ ಹಲವು ಪುರಸ್ಕಾರಗಳು ಎಂ.ಟಿ. ವಾಸುದೇವನ್ ನಾಯರ್ರಿಗೆ ಲಭಿಸಿದೆ. ಪ್ರಸಿದ್ಧ ಲೇಖಕಿ ಪ್ರಮೀಳ, ನರ್ತಕಿ ಕಲಾಮಂಡಲಂ ಸರಸ್ವತಿ ಎಂಬಿವರು ಎಂ.ಟಿ. ಯವರ ಪತ್ನಿಯರಾಗಿದ್ದಾರೆ. ಹಿರಿಯ ಪುತ್ರಿ ಸಿತಾರ ಪತಿಯೊಂದಿಗೆ ಅಮೆರಿಕದಲ್ಲಿ ಬಿಸ್ನೆಸ್ ಎಕ್ಸಿಕ್ಯೂಟಿವ್ ಆಗಿದ್ದಾರೆ. ಕಿರಿಯ ಪುತ್ರಿ ಅಶ್ವತಿ ಕೂಡಾ ನರ್ತಕಿಯಾಗಿದ್ದಾರೆ.
ಇಂದು ಸಂಜೆ 5ಕ್ಕೆ ಮಾವೂರ್ ರೋಡ್ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ನಡೆಯಲಿರುವುದು. ಎಂ.ಟಿ. ವಾಸುದೇವನ್ ನಾಯರ್ರ ನಿಧನದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಎರಡು ದಿನ ಶೋಕಾಚರಣೆ ಘೋಷಿಸಲಾಗಿದೆ. ಇಂದು ನಡೆಯ ಬೇಕಾಗಿದ್ದ ರಾಜ್ಯ ಸಚಿವಸಂಪುಟ ಸಭೆ ಸಹಿತ ಎಲ್ಲಾ ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ.