ಅಡೂರು ಬಳಿ ಕಾಡಾನೆಗಳ ಕಾದಾಟ: ಒಂದು ಆನೆ ಸಾವು: ಮರಣೋತ್ತರ ಪರೀಕ್ಷೆಗೆ ಕ್ರಮ
ಮುಳ್ಳೇರಿಯ: ಎರಡು ಗಂಡು ಕಾಡಾನೆಗಳ ಮಧ್ಯೆ ಕಾದಾಟ ಉಂ ಟಾಗಿ ಅದರಲ್ಲೊಂದು ಸಾವನ್ನಪ್ಪಿದ ಘಟನೆ ಅಡೂರಿಗೆ ಸಮೀಪದ ತಲ್ಪಚ್ಚೇರಿಯಲ್ಲಿ ನಡೆದಿದೆ. ಕೇರಳ ಅರಣ್ಯ ವ್ಯಾಪ್ತಿಯಿಂದ ಕೇವಲ 100 ಮೀಟರ್ ದೂರವಿರುವ ಕರ್ನಾಟಕ ರಾಜ್ಯಕ್ಕೆ ಸೇರಿದ ಅರಣ್ಯದಲ್ಲಿ ಗಂಟಾನೆಯೊಂದು ಸಾವಿಗೀಡಾದ ಸ್ಥಿತಿಯಲ್ಲಿ ನಿನ್ನೆ ಪತ್ತೆಯಾಗಿದೆ. ಅದರ ದೇಹದಲ್ಲಿ ದಂತದಿಂದ ತಿವಿದ ಹಲವು ಆಳದ ಗಾಯಗಳು ಪತ್ತೆಯಾ ಗಿದೆ. ಇದು ಕರ್ನಾಟಕಕ್ಕೆ ಸೇರಿದ ಪ್ರದೇಶವಾಗಿರುವುದರಿಂದಾಗಿ ಕರ್ನಾ ಟಕ ಅರಣ್ಯ ಇಲಾಖೆಯವರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆಂದೂ, ಅದಕ್ಕೆ ಅವರಿಗೆ ಅಗತ್ಯದ ಸಹಾಯ ವನ್ನು ಕೇರಳ ರಾಜ್ಯ ಅರಣ್ಯ ಇಲಾಖೆ ನೀಡುತ್ತಿದೆ ಎಂದು ಅಡೂರು ಸೆಕ್ಷನ್ ಫೋರೆಸ್ಟ್ ಆಫೀಸರ್ ರಾಜು ಎಂ.ಪಿ. ತಿಳಿಸಿದ್ದಾರೆ. ಅವರ ನೇತೃತ್ವದಲ್ಲಿ ಕೇರಳ ಅರಣ್ಯ ಇಲಾಖೆ ಸಿಬ್ಬಂದಿ ಗಳಾದ ರಾಜೇಶ್, ಸುಧೀಶ್, ಸುಧಾಕರ ಸೇರಿದಂತೆ ಹಲವರು ಸ್ಥಳಕ್ಕೆ ದಾವಿಸಿ ಕರ್ನಾಟಕ ಅರಣ್ಯ ಸಿಬ್ಬಂದಿಗಳಿಗೆ ಅಗತ್ಯದ ನೆರವು ನೀಡತೊಡಗಿದ್ದಾರೆ. ಕರ್ನಾಟಕ ಅರಣ್ಯ ಇಲಾಖೆಯ ಫೋರೆನ್ಸಿಕ್ ತಜ್ಞರು ಇಂದು ಬೆಳಿಗ್ಗೆ ಘಟನೆ ನಡೆದ ಸ್ಥಳಕ್ಕೆ ಆಗಮಿಸಿದ್ದು, ಸತ್ತ ಆನೆಯ ಮರಣೋ ತ್ತರ ಪರೀಕ್ಷೆಗೆ ಕ್ರಮ ಆರಂಭಿಸಿದ್ದಾರೆ.
ಈ ಪ್ರದೇಶದಲ್ಲಿ ರಾತ್ರಿ ವೇಳೆ ಆನೆಗಳು ಜೋರಾಗಿ ಘೀಳಿಡುವುದು ಕೇಳಿಬಂದಿತ್ತು. ಆನೆಗಳು ಘೀಳಿಡುವುದು ಆ ಪ್ರದೇಶದಲ್ಲಿ ಸಾಧಾರಣವಾ ಗಿರುವುದರಿಂದಾಗಿ ಆ ಬಗ್ಗೆ ಯಾರೂ ಹೆಚ್ಚಿನ ಗಮನ ಹರಿಸಿರಲಿಲ್ಲ. ಗಂಡಾನೆಯೊಂದು ನಿನ್ನೆ ಸತ್ತ ಸ್ಥಿತಿಯಲ್ಲಿ ಪತ್ತೆಯಾದಾಗಲೇ ಗಂಡಾನೆಗಳು ರಾತ್ರಿ ವೇಳೆ ಪರಸ್ಪರ ಕಾದಾಟ ನಡೆಸಿರುವುದು ಸ್ಪಷ್ಟಗೊಂಡಿದೆ. ಕಾದಾಟ ನಡೆಸಿದ ಇನ್ನೊಂದು ಗಂಡಾನೆಗೂ ಗಾಯ ಉಂಟಾಗಿರಬಹುದೆಂದೂ, ಅದನ್ನು ಪತ್ತೆಹಚ್ಚುವ ಶೋಧ ನಡೆಸಲಾಗುತ್ತಿದೆ ಎಂದು ಸೆಕ್ಷನ್ ಫೋರೆಸ್ಟ್ ಅಧಿಕಾರಿ ರಾಜು ಎಂ.ವಿ. ತಿಳಿಸಿದ್ದಾರೆ. ವಿಷಯ ತಿಳಿದ ಊರವರು ಭಾರೀ ಸಂಖ್ಯೆಯಲ್ಲಿ ಪ್ರದೇಶಕ್ಕೆ ತಲುಪತೊಡಗಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಆನೆಯ ಕಳೇಬರವನ್ನು ಅಲ್ಲೇ ಸಮೀಪ ದಫನಗೈಯ್ಯಲು ತೀರ್ಮಾನಿಸಲಾಗಿದೆ.
ಅಡೂರು, ಪಾಂಡಿ, ಕಾನತ್ತೂರು, ಕಾರಡ್ಕ ಮತ್ತಿತರ ಪ್ರದೇಶಗಳಲ್ಲಿ ಕಾಡಾನೆಗಳ ಹಾವಳಿ ಇತ್ತೀಚೆಗೆ ಸಹಜವಾಗಿದೆ. ಜನನಿಬಿಢ ಪ್ರದೇಶಗಳಿಗೆ ಕಾಡಾನೆಗಳು ನುಗ್ಗಿ ಬಂದು ಕೃಷಿ ನಾಶ ಪಡಿಸುವುದು ಮಾತ್ರವಲ್ಲ ಅದು ಜನರ ಪ್ರಾಣಕ್ಕೂ ಭೀತಿ ಸೃಷ್ಟಿಸುತ್ತಿದೆ.