ಅಧಿಕಾರದ ಹಗ್ಗಜಗ್ಗಾಟ ಹಿನ್ನೆಲೆ : ಎಣ್ಮಕಜೆ ಪಂ. ಉಪಾಧ್ಯಕ್ಷೆ ರಾಜೀನಾಮೆ

ಪೆರ್ಲ: ಪಕ್ಷದ ಒಂದು ವಿಭಾಗದ ವಿರೋಧದ ಹಿನ್ನೆಲೆ ಯಲ್ಲಿ ಎಣ್ಮಕಜೆ ಪಂಚಾಯತ್ ಉಪಾಧ್ಯಕ್ಷೆ ರಾಜೀನಾಮೆ ನೀಡಿದ್ದಾರೆ. ಮುಸ್ಲಿಂ ಲೀಗ್‌ನ ಡಾ. ಜಹನಾಸ್ ಹಂಸಾರ್ ರಾಜೀನಾಮೆ ನೀಡಿದ್ದು, ಇವರಿಗೆ ಬದಲಾಗಿ ೧೦ನೇ ವಾರ್ಡ್ ಪ್ರತಿನಿಧಿ ರಮ್ಲ ಉಪಾಧ್ಯಕ್ಷೆಯಾಗುವ ಸಾಧ್ಯತೆ ಇದೆ. ಕಳೆದ ಪಂಚಾಯತ್ ಚುನಾವಣೆಯ ಬಳಿಕ ಜಹನಾಸ್ ಹಾಗೂ ರಮ್ಲರ ಹೆಸರನ್ನು ಉಪಾ ಧ್ಯಕ್ಷ ಹುದ್ದೆಗೆ ಪರಿಗಣಿಸಲಾಗಿತ್ತು. ಈ ಹಿನ್ನೆಲೆಯಲ್ಲಿ  ಇವರಿಬ್ಬರನ್ನು ಎರಡೂವರೆ ವರ್ಷದಂತೆ ಉಪಾ ಧ್ಯಕ್ಷೆಯರನ್ನಾಗಿ ಮಾಡುವುದಾಗಿ ಭರವಸೆ ನೀಡಲಾಗಿತ್ತೆಂದು ಒಂದು ವಿಭಾಗ ಲೀಗ್ ಕಾರ್ಯಕರ್ತರು ತಿಳಿಸುತ್ತಾರೆ. ಆದರೆ ಎರಡೂವರೆ ವರ್ಷ ಕಳೆದರೂ ಜಹನಾಸ್ ರಾಜೀನಾಮೆ ನೀಡದ ಹಿನ್ನೆಲೆಯಲ್ಲಿ  ರಮ್ಲ ತನ್ನ ಪ್ರತಿನಿಧಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಕಾರ್ಯದರ್ಶಿಗೆ ಪತ್ರ ನೀಡಿದ್ದರು. ಆದರೆ ರಾಜೀನಾಮೆ ಪತ್ರವನ್ನು ನಿಗದಿತ ಮಾದರಿಯಲ್ಲಿ ನೀಡಬೇಕೆಂದು ಕಾರ್ಯದರ್ಶಿ ರಮ್ಲರಿಗೆ  ತಿಳಿಸಿದ್ದಾರೆ. ಕಳೆದ ಬಾರಿ ೧೦ನೇ ವಾರ್ಡ್‌ನಿಂದ ಸ್ಪರ್ಧಿಸಿದ್ದ ರಮ್ಲ ೩೦ ಮತಗಳ ಅಂತರದಲ್ಲಿ  ಗೆಲುವು ಸಾಧಿಸಿದ್ದರು. ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿಯಾಗಿದ್ದರು. ಇದರಿಂದಾಗಿ ವಾರ್ಡ್‌ನಲ್ಲಿ ಇನ್ನು ಉಪ ಚುನಾವಣೆ ನಡೆದರೆ ಅದರಿಂದ ಬಿಜೆಪಿಗೆ ಲಾಭವಾಗಬಹುದೆಂದು ಚಿಂತಿಸಿದ ಲೀಗ್ ನೇತೃತ್ವ ರಮ್ಲರ ಬೇಡಿಕೆಗೆ ಒಪ್ಪಿ ಉಪಾಧ್ಯಕ್ಷ ಹುದ್ದೆಯನ್ನು ನೀಡಲು ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ಜಹನಾಸ್ ರಾಜೀನಾಮೆ ನೀಡಿದ್ದಾರೆ. ಪಂಚಾಯತ್‌ನಲ್ಲಿ ಒಟ್ಟು ೧೭ ಮಂದಿ ಸದಸ್ಯರಿದ್ದು, ಇದರಲ್ಲಿ ಕಾಂಗ್ರೆಸ್‌ಗೆ ೫, ಲೀಗ್‌ಗೆ ಮೂರು, ಬಿಜೆಪಿಗೆ ೫, ಸಿಪಿಎಂ, ಸಿಪಿಐಗೆ ತಲಾ ಇಬ್ಬರು ಸದಸ್ಯರಿದ್ದಾರೆ.

Leave a Reply

Your email address will not be published. Required fields are marked *

You cannot copy content of this page