ಅಪಾಯಭೀತಿಯೊಡ್ಡುತ್ತಿದ್ದ ಟ್ರಾನ್ಸ್‌ಫಾರ್ಮರ್ ತೆರವು: ಪಳ್ಳ ಪೇಟೆ ಅಭಿವೃದ್ಧಿಗೆ ನಾಗರಿಕರ ಮನವಿ; ಮಾದರಿಯಾದ ಆಟೋಚಾಲಕರ ಚಟುವಟಿಕೆ

ಮುಂಡ್ಯತ್ತಡ್ಕ: ಇಲ್ಲಿನ ಪಳ್ಳ ಪೇ ಟೆಯ ಅಭಿವೃದ್ಧಿಗಾಗಿ ಇಲ್ಲಿನ ಆಟೋ ಚಾಲಕರು ಹಾಗೂ ನಾಗರಿಕರು ಹಲವು ವರ್ಷಗಳಿಂದ ಮುಂದಿರಿಸುತ್ತಿರುವ ಬೇಡಿಕೆಗಳಿಗೆ ಅಧಿಕಾರಿಗಳಿಂದ ಪರಿಗಣನೆ ಲಭಿಸತೊಡಗಿದೆ. ಇದರ ಪ್ರಾಥಮಿಕ ಹಂತವಾಗಿ ಪೇಟೆಯ ಹೃದಯ ಭಾಗದಲ್ಲಿ ಜನರಿಗೆ ಬೀತಿ ಯೊಡ್ಡುತ್ತಿದ್ದ ವಿದ್ಯುತ್ ಟ್ರಾನ್ಸ್ ಫಾರ್ಮರ್ ತೆರವುಗೊಳಿಸಲಾಗಿದೆ.

ಪಳ್ಳ ಪೇಟೆಯ ಹೃದಯ ಭಾಗದಲ್ಲಿ ಜನರಿಗೆ ಭೀತಿ ಹುಟ್ಟಿಸುವ ಟ್ರಾನ್ಸ್ ಫಾರ್ಮರ್ ಕಾರ್ಯಾಚರಿಸುತ್ತಿತ್ತು. ಆವರಣ ಬೇಲಿಯಿಲ್ಲದೇ ತೆರೆದ ಸ್ಥಿತಿಯಲ್ಲಿದ್ದ ಟ್ರಾನ್ಸ್ ಫಾರ್ಮರ್‌ನ ಫ್ಯೂಸ್‌ಗಳು ಜನರ ಕೈಗೆಟಕುವ ರೀತಿ ಯಲ್ಲಿತ್ತು. ಕೆಲವೊಮ್ಮೆ ಟ್ರಾನ್ಸ್ ಫಾರ್ಮರ್‌ನಿಂದ ಬೆಂಕಿಯ ಕಿಡಿಯೇ ಳುತ್ತಿತ್ತು. ಇದರ ಸಮೀಪದಲ್ಲೇ ಆಟೋ ಸ್ಟಾಂಡ್ ಇದ್ದು, ಶಾಲಾ ವಿದ್ಯಾರ್ಥಿಗಳ ಸಹಿತ ಪ್ರಯಾಣಿಕರು ಬಸ್‌ಗಾಗಿ ಕಾದು ನಿಲ್ಲುವ ಸ್ಥಳವೂ ಇದಾಗಿದೆ. ಇದರಿಂದ ಅಪಾಯ ಭೀತಿಯೊಡ್ಡುವ ಟ್ರಾನ್ಸ್‌ಫಾರ್ಮರ್ ಬೇರೆಡೆಗೆ ಸ್ಥಳಾಂತರಿಸಬೇಕೆಂಬ ಬೇಡಿಕೆಯನ್ನು ಇಲ್ಲಿನ ನಾಗರಿಕರು ಹಲವು ಕಾಲದಿಂದ  ಮುಂದಿರಿಸಿದ್ದರು. ಇದೇ ಬೇಡಿಕೆಯನ್ನು ಮುಂದಿರಿಸಿ ಪಳ್ಳದ ಆಟೋಚಾಲಕರ ಸಂಘಟನೆಯಾದ ಆಟೋ ಬ್ರದರ್ಸ್ ಪಳ್ಳ ಮುಖ್ಯಮಂತ್ರಿಯ ನವಕೇರಳದ ಸಭೆ ವೇಳೆ ಮನವಿ ಸಲ್ಲಿಸಿತ್ತು. ಅಲ್ಲದೆ ಕೆಎಸ್‌ಇಬಿ ಸಹಿತ ಸಂಬಂಧಪಟ್ಟ ಇಲಾಖೆಗೆ ಮನವಿ ಸಲ್ಲಿಸಿದ್ದರು.  ಶೇಣಿ ಶಾಲೆಯ ೮ನೇ ತರಗತಿ ವಿದ್ಯಾರ್ಥಿನಿಯೋರ್ವೆ ಕೂಡಾ ಟ್ರಾನ್ಸ್‌ಫಾರ್ಮರ್ ತೆರವಿಗೆ ಒತ್ತಾಯಿಸಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದಳು. ಆಟೋಚಾಲಕರ ಸಹಿತ ಸಾರ್ವಜನಿಕರ ಮನವಿಗೆ ಸ್ಪಂದಿಸಿದ ಕೆಎಸ್‌ಇಬಿ ಕೊನೆಗೂ ಟ್ರಾನ್ಸ್‌ಫಾರ್ಮರ್ ತೆರವಿಗೆ ಕ್ರಮ ಕೈಗೊಂಡಿದೆ. ಇಲ್ಲಿಂದ ಟ್ರಾನ್ಸ್‌ಫಾರ್ಮರ್ ತೆರವುಗೊಳಿಸಿ ಬೇರೆಡೆ ಸ್ಥಾಪಿಸಲಾಗಿದೆ. ಇದೇ ವೇಳೆ ಟ್ರಾನ್ಸ್‌ಫಾರ್ಮರ್ ತೆರವುಗೊಂಡ ಸ್ಥಳವನ್ನು ಇಲ್ಲಿನ ಆಟೋಚಾಲಕರು ನಿನ್ನೆ ರಾತ್ರಿ ಸಮತಟ್ಟುಗೊಳಿಸಿ ಸುಂದರಗೊಳಿಸಿದ್ದಾರೆ. ಬದಿಯಡ್ಕ, ಎಣ್ಮಕಜೆ, ಪುತ್ತಿಗೆ ಪಂಚಾಯತ್‌ಗಳು ಸಂಗಮಿಸುವ ಪ್ರದೇಶವಾಗಿದೆ ಪಳ್ಳ. ಇಲ್ಲಿ ಹಲವು ವ್ಯಾಪಾರ ಸಂಸ್ಥೆಗಳು, ಬ್ಯಾಂಕ್ ಮೊದಲಾದವುಗಳು ಕಾರ್ಯಾಚರಿಸುತ್ತಿದ್ದು ನಿತ್ಯ ಜನಸಂಚಾರವುಳ್ಳ ಪ್ರದೇಶವಾಗಿದೆ. ಉಕ್ಕಿನಡ್ಕದಲ್ಲಿರುವ ಸರಕಾರಿ ಮೆಡಿಕಲ್ ಕಾಲೇಜಿಗೆ ಇಲ್ಲಿಂದ ಕೇವಲ ೫ ಕಿಲೋ ಮೀಟರ್ ದೂರವಿದೆ. ಆದ್ದರಿಂದ ಈ ಪೇಟೆಯ ಅಭಿವೃದ್ಧಿಗೆ ಸರಕಾರ ಪರಿಗಣನೆ ನೀಡಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ಪಳ್ಳಪೇಟೆಯ ಅಭಿವೃದ್ಧಿಗಾಗಿ ಆಟೋಚಾಲಕರು ನಡೆಸುವ ಪ್ರಯತ್ನವನ್ನು ನಾಗರಿಕರು ಅಭಿನಂದಿಸಿದ್ದಾರೆ. ಪಳ್ಳ ಪೇಟೆಯಲ್ಲಿ ೨೫ರಷ್ಟು ಆಟೋರಿಕ್ಷಾಗಳಿವೆ. ಆದರೆ ಇದುವರೆಗೆ ಸರಿಯಾದ ನಿಲ್ದಾಣವಿರಲಿಲ್ಲ. ಇದೀಗ ಟ್ರಾನ್ಸ್‌ಫಾರ್ಮರ್ ತೆರವುಗೊಳಿಸಿದುದರಿಂದ ಆಟೋರಿಕ್ಷಾಗಳ ನಿಲುಗಡೆಗೆ ಸ್ಥಳಾವಕಾಶ ಲಭಿಸಿದೆ.  ಆಟೋಚಾಲಕರು ಸೇರಿ ಆಟೋ ಬ್ರದರ್ಸ್ ಪಳ್ಳ ಎಂಬ ಸಂಘಟನೆ ರೂಪೀಕರಿಸಿ ಸಮಾಜಸೇವಾ ಚಟುವಟಿಕೆ ನಡೆಸುತ್ತಿದ್ದಾರೆ. ಈಗಾಗಲೇ ಅಸೌಖ್ಯಬಾಧಿತ ಕೆಲವು ಮಂದಿಗೆ ಚಿಕಿತ್ಸಾ ಸಹಾಯ.ವೊದಗಿಸಿದ್ದು ಅಲ್ಲದೆ ಹಲವರಿಗೆ ಕಿಟ್ ಮೊದಲಾದವುಗಳನ್ನು ನೀಡಿ ಮಾದರಿಯಾಗಿದ್ದಾರೆ.

Leave a Reply

Your email address will not be published. Required fields are marked *

You cannot copy content of this page