ಅಪಾಯ ಕೈಬೀಸಿ ಕರೆಯುವ ಮುಂಡಿತ್ತಡ್ಕ ಟ್ರಾನ್ಸ್‌ಫಾರ್ಮರ್ ಸ್ಥಳಾಂತರಿಸಲು ವಿದ್ಯಾರ್ಥಿನಿಯ ಮನವಿ

ಮುಂಡಿತ್ತಡ್ಕ: ಮುಂಡಿತ್ತಡ್ಕ ಪಳ್ಳಂ ಪೇಟೆಯಲ್ಲಿರುವ ಟ್ರಾನ್ಸ್‌ಫಾರ್ಮರ್ ಅಪಘಾತ ಭೀತಿ ಸೃಷ್ಟಿಸುತ್ತಿದೆ. ಇದನ್ನು ಸ್ಥಳಾಂತರಿಸಬೇಕೆಂದು ಆಗ್ರಹಿಸಿ ಶೇಣಿ ಶಾರದಾಂಬಾ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿನಿ ಆಯಿಷತ್ ಶಾಸ ನವಕೇರಳ ಸಭೆ ಪೈವಳಿಕೆಯಲ್ಲಿ ನಡೆದಾಗ ದೂರು ನೀಡಿದ್ದಾಳೆ. ಈ ಟ್ರಾನ್ಸ್‌ಫಾರ್ಮರ್‌ನಿಂದ ಬೆಂಕಿ ಕಿಡಿಗಳು ದಿನವೂ ಕಂಡು ಬರುತ್ತಿದ್ದು, ಇದರ ಸುತ್ತು ಆವರಣ ಬೇಲಿ ಇಲ್ಲ. ಕೈಗೆಟಕುವ ದೂರದಲ್ಲಿ ಫ್ಯೂಸ್‌ಗಳಿದ್ದು, ಶಾಲಾ ಮದ್ರಸ ವಿದ್ಯಾರ್ಥಿಗಳು  ಈ ದಾರಿಯಾಗಿ ಸಂಚರಿಸುತ್ತಿದ್ದಾರೆ.

ಸಮೀಪದಲ್ಲೇ ಬಸ್ ತಂಗುದಾಣವೂ ಇದೆ. ಅಂಗನ ವಾಡಿ, ಆಯುರ್ವೇದ ಸಬ್ ಸೆಂಟರ್, ರೇಶನ್ ಅಂಗಡಿ, ಆಟೋ ನಿಲ್ದಾಣವೂ ಇದೆ. ಇಲ್ಲಿ ಜೀವ ಕೈಯಲ್ಲಿ ಹಿಡಿದು ನಿಲ್ಲಬೇಕಾದ ಸ್ಥಿತಿ ಇದ್ದು ಈ ಬಗ್ಗೆ ಸಮಾಜಸೇವಕರು ಈ ಮೊದಲೇ ಅಧಿಕಾರಿಗಳಿಗೆ ದೂರು ನೀಡಿದ್ದರು. ಆದರೆ ಯಾವುದೇ ಫಲ ಉಂಟಾಗದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿ ನವಕೇರಳ ಸಭೆಯಲ್ಲಿ ದೂರು ನೀಡಿದ್ದಾಳೆ.

ಪಂಚಾಯತ್ ಜನಪ್ರತಿನಿಧಿ ಗಳಾದ ಸಿದ್ಧಿಖ್ ಬಳಮೊಗರು, ಆಯಿಷತ್ ಬುಶ್ರಾ ದಂಪತಿ ಪುತ್ರಿಯಾದ ಆಯಿಷತ್ ಶಾಸ ನೀಡಿದ ದೂರನ್ನು ಸಂಬಂಧಪಟ್ಟ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ಮೊಬೈಲ್ ಸಂದೇಶ ಲಭಿಸಿರುವುದಾಗಿ ಹೇಳಲಾ ಗುತ್ತಿದ್ದು, ಈ ಸಮಸ್ಯೆಗೆ ಪರಿಹಾರ ಉಂಟಾಗಬಹುದೆಂದು ವಿದ್ಯಾರ್ಥಿನಿ ನಿರೀಕ್ಷಿಸುತ್ತಿದ್ದಾಳೆ.

You cannot copy contents of this page