ಅಭಿವೃದ್ಧಿ ಯೋಜನೆಗಳು ಬುಡಮೇಲು, ಭ್ರಷ್ಟಾಚಾರ- ಆರೋಪ: ಕಾಸರಗೋಡು ನಗರಸಭೆ ವರ್ಕಿಂಗ್ ಗ್ರೂಪ್ ಮಹಾಸಭೆಯಲ್ಲಿ ಗದ್ದಲ, ಕೋಲಾಹಲ
ಕಾಸರಗೋಡು: ನಗರಸಭಾ ವರ್ಕಿಂಗ್ ಗ್ರೂಪ್ ಮಹಾಸಭೆ ಸದ್ದುಗದ್ದಲದಲ್ಲಿ ಕೊನೆಗೊಂಡಿತು. ಮುಕ್ಕಾಲು ಗಂಟೆ ಕಾಲ ಮುಂದುವರಿದ ವಾಗ್ವಾದ ಗದ್ದಲದಿಂದಾಗಿ ಸಭೆ ಕೋಲಾಹಲದಲ್ಲಿ ಮುಳುಗಿತು. ವಿಷಯ ತಿಳಿದು ತಲುಪಿದ ಪೊಲೀಸರು ಕೋಲಾಹಲ ಹೊಕೈಗೆ ತಲುಪುವುದನ್ನು ತಡೆದರು.
ನಿನ್ನೆ ಸಂಜೆ ನಗರಸಭಾ ಡೈನಿಂಗ್ ಹಾಲ್‌ನಲ್ಲಿ ಸಭೆ ಆರಂಭಗೊಂಡೊಡನೆ ವಿಪಕ್ಷ ನೇತಾರ ಪಿ. ರಮೇಶ್ ಪ್ರತಿ ಭಟನೆಯೊಂದಿಗೆ ರಂಗಕ್ಕಿಳಿದರು. ಹಲವು ವರ್ಷಗಳಿಂದ ವರ್ಕಿಂಗ್ ಕಮಿಟಿ ಸಭೆ ನಗರಸಭೆಯಲ್ಲಿ ಕೇವಲ ಪ್ರಹಸನವಾಗಿ ನಡೆಯುತ್ತಿದೆಯೆಂದು ಅವರು ಆರೋಪಿಸಿದರು. ಎರಡು ವರ್ಷಗಳ ಮಧ್ಯೆ ೨೩ ಕೋಟಿ ರೂಪಾಯಿ ಲ್ಯಾಪ್ಸಾಗಿದೆ. ವರ್ಕಿಂಗ್ ಕಮಿಟಿ ಸಿದ್ಧಪಡಿಸುವ ಯೋಜನೆಗಳು ಜ್ಯಾರಿಯಾಗುತ್ತಿಲ್ಲ. ವರದಿಯನ್ನು ತಿದ್ದುಪಡಿ ನಡೆಸಿ ಭ್ರಷ್ಟಾಚಾರದ ಆಡಳಿತವನ್ನು ನಗರಸಭಾ ಆಡಳಿತಗಾರರು ನಾಡಿಗೆ ಸಮರ್ಪಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು. ಲೀಗ್ ನಕಲಿ ದಾಖಲೆಗಳನ್ನು ತಯಾರಿಸುತ್ತಿದೆ.
ಕಳೆದ ಎರಡು ಹಣಕಾಸು ವರ್ಷಗಳಲ್ಲಿ 60 ಶೇಕಡಾಕ್ಕಿಂತ ಹೆಚ್ಚು ಯೋಜನೆಗಳನ್ನು ಆರಂಭಿಸಿಲ್ಲ. ಅದನ್ನು ಪೂರ್ತಿಗೊಳಿಸಿದ ಬಳಿಕ ಹೊಸ ಯೋಜನೆ ಆವಿಷ್ಕರಿಸಿದರೆ ಸಾಕೆಂದೂ ಅವರು ತಿಳಿಸಿದರು. ಇದೇ ಸಂದರ್ಭದಲ್ಲಿ ನಗರಸಭಾ ಚೆಯರ್‌ಮೆನ್ ಕೂಡಾ ತಮ್ಮ ಹೇಳಿಕೆಯನ್ನು ಸಭೆಯ ಮುಂದಿರಿಸಿದರು. ಕೌನ್ಸಿಲರ್‌ಗಳು ಎರಡು ತಂಡಗಳಾಗಿ ವಾಗ್ವಾದದಲ್ಲಿ ತೊಡಗಿದರು. ವರ್ಕಿಂಗ್ ಗ್ರೂಪ್ ಸದಸ್ಯರು ಕೂಡಾ ಹೇಳಿಕೆಗಳೊಂದಿಗೆ ರಂಗಕ್ಕಿಳಿದರು. ಮುಕ್ಕಾಲು ಗಂಟೆಯ ಬಳಿಕ ಬಿಜೆಪಿ ಕೌನ್ಸಿಲರ್‌ಗಳು ಸಭೆಯಿಂದ ಮರಳಿದರು.