ಅರ್ಧ ಬೆಲೆಗೆ ವಾಹನ, ಇತರ ಸಾಮಗ್ರಿಗಳ ಭರವಸೆ: ಕುಂಬ್ಡಾಜೆ ಸಹಿತ ಜಿಲ್ಲೆಯಿಂದಲೂ ಹಲವರಿಂದ ಹಣ ಪಡೆದು ವಂಚನೆ
ಕಾಸರಗೋಡು: ದ್ವಿಚಕ್ರ ವಾಹನಗಳು, ಲ್ಯಾಪ್‌ಟಾಪ್, ಹೊಲಿಗೆ ಯಂತ್ರ ಎಂಬಿವುಗಳನ್ನು ಅರ್ಧ ಬೆಲೆಗೆ ನೀಡುವುದಾಗಿ ತಿಳಿಸಿ ತೊಡುಪುಳ ನಿವಾಸಿ ಅನಂತುಕೃಷ್ಣ ಹಾಗೂ ತಂಡ ಕಾಸರಗೋಡು ಜಿಲ್ಲೆಯ ವಿವಿಧೆಡೆಗಳಿಂದಲೂ ಒಂದು ಕೋಟಿ ರೂಪಾಯಿಗಿಂತ ಹೆಚ್ಚು ಮೊತ್ತ ಲಪಟಾಯಿಸಿರುವುದಾಗಿ ದೂರಲಾಗಿದೆ. ಸಾಯಿಗ್ರಾಮಂ ಗ್ಲೋಬಲ್ ಟ್ರಸ್ಟ್ ಡೈರೆಕ್ಟರ್ ಅನಂತಕುಮಾರ್ ಮುಖಾಂತರ ಅನಂತಕೃಷ್ಣನನ್ನು ಪರಿಚಯಗೊಂಡ ಕಾಸರಗೋಡು ಜಿಲ್ಲೆಯ ಮೂರು ಸಾಮಾಜಿಕ ಸಂಘಟನೆಗಳು ವಂಚ ಗೀಡಾಗಿವೆ.
ಕುಂಬ್ಡಾಜೆಯ ಮೈತ್ರಿ ವಾಚನಾಲಯ, ಕಾಞಂಗಾಡ್ ಮೋನಾಚದ ಸೋಶ್ಟೊ ಎಕಾನೋಮಿಕ್ ಡೆವಲಪ್‌ಮೆಂಟ್ ಸೊಸೈಟಿ, ಕಾಸರಗೋಡು ನಗರ ಕೇಂದ್ರೀಕರಿಸಿ ಕಾರ್ಯಾಚರಿಸುವ ಒಂದು ಸಾಮಾಜಿಕ ಸಂಘಟನೆಯನ್ನು ಅನಂತುಕೃಷ್ಣ ನೇತೃತ್ವದ ತಂಡ ವಂಚಿಸಿದೆ ಎಂದು ದೂರಲಾಗಿದೆ.
ಕುಂಬ್ಡಾಜೆಯ ಮೈತ್ರಿ ವಾಚನಾಲಯ ಕಮಿಟಿ ಮುಖಾಂತರ ಸುಮಾರು ೩೬ ಮಂದಿ ಸ್ಕೂಟರ್ ಹಾಗೂ ೩೬ ಮಂದಿ ಲ್ಯಾಪ್‌ಟಾಪ್‌ಗಾಗಿ ಅರ್ಧ ಹಣ ನೀಡಿದ್ದಾರೆ. ಈ ಮೂಲಕ ಸುಮಾರು 30 ಲಕ್ಷ ರೂಪಾಯಿಗಳ ಸೊತ್ತು ಲಭಿಸಲು ಬಾಕಿಯಿದೆಯೆಂದು ಕಮಿಟಿಯ ಕಾರ್ಯದರ್ಶಿ ಶರೀಫ್ ತಿಳಿಸಿದ್ದಾರೆ. ಈ ಬಗ್ಗೆ ತಿಳಿಸಿ ಮುಖ್ಯಮಂತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊದ ಲಾದವರಿಗೆ ದೂರು ಸಲ್ಲಿಸುವುದಾಗಿ ಶರೀಫ್ ತಿಳಿಸಿದ್ದಾರೆ. ಮೋನಾಚದ ಸಾಮಾಜಿಕ ಸಂಘಟನೆಯಿಂದ 41 ಲಕ್ಷ ರೂಪಾಯಿಗಳನ್ನು ಅನಂತುಕೃಷ್ಣ ನೇತೃತ್ವದ ತಂಡ ಪಡೆದುಕೊಂಡಿದೆ. 39 ದ್ವಿಚಕ್ರ ವಾಹನಗಳು ಸಹಿತ 106 ಮಂದಿಗೆ ಸಾಮಗ್ರಿ ಸಿಗಲು ಬಾಕಿಯಿದೆ ಎಂದು ತಿಳಿಸಲಾಗಿದೆ.
ಸಾಮಾಜಿಕ ಸೇವಾ ಚಟುವಟಿಕೆಯ ಅಂಗವಾಗಿ ಉತ್ತಮ ಉದ್ದೇಶದೊಂದಿಗೆ ಆರಂಭಿಸಿದ ಸಂಘಟನೆ ಮೂಲಕ ಈ ರೀತಿ ಅರ್ಧಬೆಲೆಗೆ ವಾಹನ ಸಹಿತ ವಿವಿಧ ಸಾಮಗ್ರಿಗಳ ಭರವಸೆಯೊಡ್ಡಿ ಜನರಿಂದ ಹಣ ಪಡೆದು ವಂಚಿಸಲಾಗಿದೆ.
ಈ ಮೊದಲು ಹಲವರಿಗೆ ಸ್ಕೂಟರ್, ಹೊಲಿಗೆ ಯಂತ್ರ, ಲ್ಯಾಪ್‌ಟಾಪ್, ಜೈವಿಕ ಗೊಬ್ಬರ ಮೊದಲಾದವುಗಳನ್ನು ಕುಂಬ್ಡಾಜೆಯ ಮೈತ್ರಿ ವಾಚನಾಲಯ ಮೂಲಕ ವಿತರಿಸಲಾಗಿದೆ. ಆದರೆ ಅನಂತರ ಅನಂತುಕೃಷ್ಣನ್ ನೇತೃತ್ವದ ತಂಡ ಹಣ ಪಡೆದು ವಾಹನ ಸಹಿತ ಸಾಮಗ್ರಿಗಳನ್ನು ನೀಡದೆ ವಂಚಿಸಿದೆಯೆಂದು ಕಾರ್ಯದರ್ಶಿ ಶರೀಫ್ ತಿಳಿಸಿದ್ದಾರೆ. ಇದೇ ವೇಳೆ ಈ ವಂಚನೆಗಳ ಬಗ್ಗೆ ವಿವಿಧೆಡೆಗಳಿಂದ ಲಭಿಸಿದ ದೂರುಗಳ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.