ಆಟೋರಿಕ್ಷಾ ಮಗುಚಿ ಚಾಲಕ ಮೃತ್ಯು: ಪುತ್ರನಿಗೆ ಗಂಭೀರ
ಕಾಸರಗೋಡು: ಆಟೋರಿಕ್ಷಾ ಮಗುಚಿ ಬಿದ್ದು ಚಾಲಕ ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಕುಂಡಂಕುಳಿ ಪುತ್ಯಡ್ಕದ ವಿ. ಗೋಪಿ (೬೨) ಸಾವನ್ನಪ್ಪಿದ ದುರ್ದೈವಿ. ಹೊಸದುರ್ಗ ಟ್ರಾಫಿಕ್ ಸರ್ಕಲ್ ಬಳಿಯ ಆಟೋರಿಕ್ಷಾ ಸ್ಟಾಂಡನ್ನು ಕೇಂದ್ರೀಕರಿಸಿ ಗೋಪಿ ಆಟೋ ರಿಕ್ಷಾ ಸೇವೆ ನಡೆಸುತ್ತಿದ್ದರು. ಅವರು ಮೊನ್ನೆ ರಾತ್ರಿ ಪುತ್ರ ಗಿಜೇಶ್‌ನೊಂದಿಗೆ ಆಟೋ ರಿಕ್ಷಾದಲ್ಲಿ ಮನೆಗೆ ಹಿಂತಿರುಗುತ್ತಿದ್ದ ದಾರಿ ಮಧ್ಯೆ ಪೆರಿಯಾ- ಮೂನಾಮಂಕಡವು ನಿಡುವೋಟುಪಾರಕ್ಕೆ ತಲುಪಿದಾಗ ರಿಕ್ಷಾ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಅಪಘಾತದಲ್ಲಿ ಗೋಪಿ ಮತ್ತು ಅವರ ಪುತ್ರ ಗಿಜೇಶ್ ಗಂಭೀರ ಗಾಯಗೊಂಡು ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗೋಪಿ ಮೃತಪಟ್ಟಿದ್ದಾರೆ. ಮೃತರು ಪತ್ನಿ ಸಿ. ಜಾನಕಿ, ಇತರ ಮಕ್ಕಳಾದ ಜಿನ, ಜಿಷ, ಅಳಿಯ ಮತ್ತು ಸೊಸೆಯಂದಿರಾದ ಅನೂಪ್, ನೀಲೇಶ್, ನಿಷಿನ, ಸಹೋದರ- ಸಹೋದರಿಯರಾದ ಶ್ರೀಧರನ್, ಕಾರ್ತ್ಯಾಯಿನಿ, ಓಮನ, ಲಕ್ಷ್ಮಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಬೇಕಲ ಪೊಲೀಸರು ತನಿಖೆ ನಡೆಸಿದರು.