ಆನ್‌ಲೈನ್ ಉದ್ಯೋಗ ಭರವಸೆಯೊಡ್ಡಿ ಯುವತಿಯ ಲಕ್ಷಾಂತರ ರೂ.ಗಳ ಲಪಟಾವಣೆ: ತನಿಖೆ ಆರಂಭ
ಕಾಸರಗೋಡು: ಆನ್‌ಲೈನ್ ಉದ್ಯೋಗ ದೊರಕಿಸಿಕೊಡುವುದಾಗಿ ಭರವಸೆಯೊಡ್ಡಿ ಚೀಮೇನಿ ನಿಡುಂಬ ನಿವಾಸಿಯಾದ 31ರ ಹರೆಯದ ಯುವತಿಯ ಲಕ್ಷಾಂತರ ರೂಪಾಯಿ ಗಳನ್ನು ಲಪಟಾಯಿಸಿದ ಪ್ರಕರಣದಲ್ಲಿ ಚೀಮೇನಿ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಈ ತಿಂಗಳ 7ರಿಂದ 20ರ ವರೆಗಿನ ದಿನಗಳಲ್ಲಿ ಟೆಲಿಗ್ರಾಂ ಮೂಲಕ ದೂರುಗಾರ್ತಿಯಾದ ಯುವತಿಯಿಂದ ಗೂಗಲ್ ಪೇ ಮೂಲಕ ಹಾಗೂ ಯೋನೋ ಆಪ್ ಮೂಲಕ 3,39,387 ರೂಪಾಯಿ ಗಳನ್ನು ತಂಡ ಲಪಟಾಯಿಸಿದೆ. ಇತ್ತೀಚೆಗಷ್ಟೇ ತಾನು ವಂಚನೆಗೀಡಾಗಿರುವುದು ಯುವತಿಯ ಅರಿವಿಗೆ ಬಂದಿದೆ. ಸೈಬರ್ ಅಪರಾಧ ಕೃತ್ಯಗಳ ವಿರುದ್ಧ ಕೇಂದ್ರ ಸರಕಾರ ಫೋನ್ ಸಹಿತ ಇತರ ವ್ಯವಸ್ಥೆಗಳ ಮೂಲಕ ತಿಳುವಳಿಕೆ ಮೂಡಿಸುತ್ತಿರುವಾಗಲೇ ಇಂತಹ ವಂಚನೆಗಳಲ್ಲಿ ಸಿಲುಕುತ್ತಿರುವುದು ಕಂಡುಬರುತ್ತಿದೆ. ಕಾಸರಗೋಡು ಜಿಲ್ಲೆಯ ಬಹುತೇಕ ಪೊಲೀಸ್ ಠಾಣೆಗಳಲ್ಲೂ ಸೈಬರ್ ವಂಚನೆ ಬಗ್ಗೆ ದೂರುಗಳು ಹೆಚ್ಚಾಗುತ್ತಿರುವುದಾಗಿ ತಿಳಿಯಲಾಗಿದೆ. ವಂಚನೆ ತಂಡ ವಾಟ್ಸಪ್ ಮೂಲಕ ಜನರನ್ನು ಬಲೆಗೆ ಹಾಕಿಕೊಳ್ಳುತ್ತಿದೆ.