ಆನ್‌ಲೈನ್ ಟ್ರೇಡಿಂಗ್ ಮೂಲಕ ವಂಚನೆ: ಇಬ್ಬರು ಸೆರೆ
ಕಾಸರಗೋಡು: ಆನ್‌ಲೈನ್ ಟ್ರೇಡಿಂಗ್ ವಂಚನೆಯ ಮೂಲಕ ವೈದಿಕನಿಂದ 1.41 ಕೋಟಿಗೂ ಹೆಚ್ಚು ರೂ. ವಂಚಿಸಿದ ಪ್ರಕರಣದಲ್ಲಿ ಪ್ರಧಾನ ಆರೋಪಿಗಳಾದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಧಾನ ಆರೋಪಿಯಾದ ಮಹಾರಾಷ್ಟ್ರ ನಿವಾಸಿ ಮುಹಮ್ಮದ್ ಜಾವಿದ್ ಅನ್ಸಾರಿ (35), ಕಲ್ಲಿಕೋಟೆ ತಾಮರಶ್ಶೇರಿ ಪೆರುಂಬಳ್ಳಿ ನಿವಾಸಿ ಅಜ್ಮಲ್ ಕೆ. (25) ಎಂಬಿವರನ್ನು ಬಂಧಿಸಲಾಗಿದೆ. ಇದರಲ್ಲಿ ಪ್ರಧಾನ ಆರೋಪಿಯಾದ ಮಹಾರಾಷ್ಟ್ರ ನಿವಾಸಿ ಮುಹಮ್ಮದ್ ಜಾವಿದ್ ಅನ್ಸಾರಿಯನ್ನು ಪ್ರತ್ಯೇಕ ತನಿಖಾ ತಂಡ ಮಹಾರಾಷ್ಟ್ರದಿಂದ ಸಾಹಸಿಕವಾಗಿ ಬಂಧಿಸಿದೆ.
2024 ನವೆಂಬರ್‌ನಿಂದ 2025 ಜನವರಿ 15ರ ವರೆಗೆ ವಂಚನೆ ನಡೆಸಲಾಗಿದೆ. ಕಾಸರಗೋಡು ನಿವಾಸಿಯಾದ ಕೋತನಲ್ಲೂರ್ ತುವಾನಿಸ ಪ್ರಾರ್ಥನಾಲಯದ ಅಸಿಸ್ಟೆಂಟ್ ಡೈರೆಕ್ಟರ್ ಫಾ| ಟಿನೇಶ್ ಕುರಿಯನ್ (37) ಎಂಬವರಿಗೆ ಹಣ ನಷ್ಟಗೊಂಡಿತ್ತು. ಮಹಾರಾಷ್ಟ್ರ ನಿವಾಸಿ ಶೇರು ಟ್ರೇಡಿಂಗ್‌ನಲ್ಲಿ ಆಸಕ್ತಿ ಇರುವ ಫಾ| ಟೀನೇಶ್ ಕುರಿಯನ್‌ರನ್ನು ಸಾಮಾಜಿಕ ಜಾಲತಾಣಗಳ ಮೂಲಕ ಸಂಪರ್ಕಿಸಿ ಆದಿತ್ಯ ಬಿರ್ಲ ಕ್ಯಾಪಿಟಲ್ ಸ್ಟೋಕ್ಸ್ ಆಂಡ್ ಸೆಕ್ಯೂರಿಟಿ ಎಂಬ ಹೆಸರಲ್ಲಿ ವೈದಿಕನನ್ನು ಫೋನ್ ಮೂಲಕ ಸಂಪರ್ಕಿಸಿ ವಂಚನೆ ನಡೆಸಲಾಗಿತ್ತು. 1 ಕೋಟಿಗೂ ಹೆಚ್ಚು ಹಣ ಖಾತೆ ಮೂಲಕ ಪಾವತಿಸಿದರೂ ಲಾಭವೇನೂ ಲಭಿಸದ ಹಿನ್ನೆಲೆಯಲ್ಲಿ ವೈದಿಕ ಪೊಲೀಸರಿಗೆ ದೂರು ನೀಡಿದ್ದರು.
ಕೇಸು ದಾಖಲಿಸಿದ ಕಡತುರುತ್ತಿ ಪೊಲೀಸರು ಆರೋಪಿಗಳಾದ ಕಲ್ಲಿಕೋಟೆ ನಿವಾಸಿಗಳಾದ ಶಂನಾದ್, ಮುಹಮ್ಮದ್ ಮಿನಾಜ್ ಎಂಬಿವರನ್ನು ಈ ಮೊದಲು ಬಂಧಿಸಿದ್ದರು. ಬಳಿಕ ನಡೆಸಿದ ತನಿಖೆಯಲ್ಲಿ ಅಜ್ಮಲ್ ಕೂಡಾ ಈ ವಂಚನಾ ಜಾಲದಲ್ಲಿ ಒಳಗೊಂಡಿದ್ದಾನೆಂದು ತಿಳಿದು ಬಂದಿದ್ದು, ಈತನನ್ನು ಸೆರೆ ಹಿಡಿಯಲು ಪ್ರಯತ್ನಿಸುತ್ತಿದ್ದ ಮಧ್ಯೆ ಈತ ಠಾಣೆಗೆ ಹಾಜರಾಗಿದ್ದನು. ಈ ಹಿನ್ನೆಲೆಯಲ್ಲಿ ಈ ಜಾಲದ ಪ್ರಮುಖ ಸೂತ್ರಧಾರರು ಉತ್ತರ ಭಾರತದವರು ಎಂದು ಪತ್ತೆಹಚ್ಚಿ ಇವರ ಸೆರೆಗೆ ಪ್ರತ್ಯೇಕ ತನಿಖಾ ತಂಡ ರೂಪೀಕರಿಸಿ ಕಾರ್ಯಾ ಚರಿಸಲಾಗಿತ್ತು. ಸೈಬರ್ ಸೆಲ್‌ನ ಸಹಾಯದೊಂದಿಗೆ ನಡೆಸಿದ ತನಿಖೆಯಲ್ಲಿ ಮಹಾರಾಷ್ಟ್ರದಿಂದ ಈತನನ್ನು ಸೆರೆ ಹಿಡಿಯಲಾಗಿದೆ.