ಆಸ್ಪತ್ರೆಯಲ್ಲಿ ಭಾರೀ ಅಗ್ನಿ ಅನಾಹುತ: 10 ನವಜಾತ ಶಿಶುಗಳ ಸಜೀವ ದಹನ
ಲಕ್ನೋ: ಉತ್ತರಪ್ರದೇಶದ ಮಹಾರಾಣಿ ಝಾನ್ಸಿ ಲಕ್ಷ್ಮೀಬಾಯಿ ವೈದ್ಯಕೀಯ ಕಾಲೇಜಿನ ನವಜಾತ ಶಿಶುಗಳ ತೀವ್ರ ನಿಗಾ ಘಟಕ (ಎನ್‌ಐಸಿಯು) ದಲ್ಲಿ ನಿನ್ನೆ ತಡರಾತ್ರಿ ನಡೆದ ಭಾರೀ ಅಗ್ನಿ ಅನಾಹುತದಲ್ಲಿ 10ಕ್ಕೂ ಹೆಚ್ಚು ನವಜಾತ ಶಿಶುಗಳು ಸಜೀವ ದಹನಗೊಂಡಿವೆ. ಮಾತ್ರವಲ್ಲ 16 ಮಕ್ಕಳು ಜೀವನ್ಮರಣ ಹೋರಾಟದಲ್ಲಿವೆ.
ಈ ವಾರ್ಡ್‌ನಲ್ಲಿ 54ಕ್ಕೂ ಹೆಚ್ಚು ನವಜಾತ ಶಿಶುಗಳನ್ನು ದಾಖಲಿಸಲಾಗಿತ್ತು. ಇದರಲ್ಲಿ ಹೆಚ್ಚಿನ ಶಿಶುಗಳಿಗೆ ಸುಟ್ಟಗಾಯವುಂಟಾಗಿದೆ. ಅವುಗಳನ್ನು ತಕ್ಷಣ ಬೇರೆಡೆಗೆ ಸ್ಥಳಾಂತರಿಸಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗಲಿರಬಹು ದೆಂದು ಸಂಶಯಿಸಲಾಗಿದೆ.
ವರದಿಗಳ ಪ್ರಕಾರ 10 ಶಿಶುಗಳು ಸಾವನ್ನಪ್ಪಿ ವೆಯೆಂದು ಝಾನ್ಸಿ ಡಿ.ಎಂ ಅವಿನಾಶ್ ಕುಮಾರ್ ತಿಳಿಸಿದ್ದಾರೆ. ವಿಷಯ ತಿಳಿದಾಕ್ಷಣ ಅಗ್ನಿಶಾಮಕದಳ ಸ್ಥಳಕ್ಕಾಗಮಿಸಿ ಗಂಟೆಗಳ ಕಾಲ ನಡೆಸಿದ ಕಾರ್ಯಾಚರಣೆಯಲ್ಲಿ ಬೆಂಕಿ ನಂದಿಸುವಲ್ಲಿ ಸಫಲರಾಗಿದ್ದಾರೆ. ಪೊಲೀಸರು ಹಾಗೂ ಊರವರೂ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಜಿಲ್ಲಾಡಳಿತ ಅಧಿಕಾರಿಗಳು ಹಾಗೂ ಅಗ್ನಿಶಾಮಕದಳ ಪರಿಹಾರ ಕ್ರಮವನ್ನು ಚುರುಕುಗೊಳಿಸಿದ್ದಾರೆ.
ಬೆಂಕಿ ಅನಾಹುತಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅನಾಹುತದ ಕುರಿತು 12 ತಾಸುಗಳೊಳಗಾಗಿ ತುರ್ತು ವರದಿ ಸಲ್ಲಿಸುವಂತೆ ಝಾನ್ಸಿ ಕಮಿಶನರ್ ಹಾಗೂ ಡಿಐಜಿಗೆ ಸೂಚನೆ ನೀಡಿದ್ದಾರೆ. ಅದರ ಜೊತೆಗೆ ಗಾಯಗೊಂಡ ಕಂದಮ್ಮಗಳಿಗೆ ಸೂಕ್ತ ಚಿಕಿತ್ಸೆ ಹಾಗೂ ಸೂಕ್ತ ನಷ್ಟ ಪರಿಹಾರ ನೀಡಲಾಗುವುದು.ಇದೊಂದು ಹೃದಯ ವಿದ್ರಾವಕ ಘಟನೆಯಾಗಿದೆ. ಈ ಅನಾಹುತದಲ್ಲಿ ಮಕ್ಕಳ ಸಾವು ಅತ್ಯಂತ ದುಖಕರ ಹಾಗೂ ವಿದ್ರಾವಕವಾಗಿದೆ.