ಆಸ್ಪತ್ರೆ ಲಿಫ್ಟ್‌ನೊಳಗೆ ಬಾಲಕಿಗೆ ಕಿರುಕುಳ ಯತ್ನ: ಆರೋಪಿ ಬಂಧನ

ಕುಂಬಳೆ: ಆಸ್ಪತ್ರೆಯ ಲಿಫ್ಟ್‌ನೊಳಗೆ ಹತ್ತರ ಹರೆಯದ ಬಾಲಕಿಗೆ ಕಿರುಕುಳ ನೀಡಲು ಯತ್ನಿಸಿದ ಪ್ರಕರಣದಲ್ಲಿ  ಆರೋಪಿಯಾದ ಮಧ್ಯವಯಸ್ಕನನ್ನು ಪೊಲೀಸರು ಮೂರು ದಿನದೊಳಗೆ ಬಂಧಿಸಿದ್ದಾರೆ.

ಬದಿಯಡ್ಕ ಬಳಿಯ ಪೆರಡಾಲ ನಿವಾಸಿ ಮೊಹಮ್ಮದ್ (೫೧) ಎಂಬಾತನನ್ನು ಕುಂಬಳೆ ಪೊಲೀಸ್ ಇನ್ಸ್‌ಪೆಕ್ಟರ್ ಇ. ಅನೂಪ್, ಎಸ್.ಐ. ವಿ.ಕೆ. ಅನೀಶ್ ಎಂಬಿವರು ಸೇರಿ ಸೆರೆ ಹಿಡಿದಿದ್ದಾರೆ.

ಕಿರುಕುಳ ಯತ್ನಕ್ಕೊಳಗಾದ ಬಾಲಕಿ ಆರೋಪಿಯ ಗುರುತು ಹಚ್ಚಿದ್ದಾಳೆ. ಅನಂತರ ಆರೋಪಿಯನ್ನು ವೈದ್ಯಕೀಯ ತಪಾಸಣೆಗೊಳಪಡಿಸಿ ಪ್ರಥಮದರ್ಜೆ ಮೆಜಿಸ್ಟ್ರೇಟ್ ನ್ಯಾಯಾ ಲಯದಲ್ಲಿ ಹಾಜರುಪಡಿಸಲಾಯಿತು. ನ್ಯಾಯಾಲಯ ಆರೋಪಿಗೆ  ಎರಡು ವಾರಗಳ ರಿಮಾಂಡ್ ವಿಧಿಸಿದೆ. ಕಳೆದ ಸೋಮವಾರ ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ.ಬಾಲಕಿ ತಾಯಿಯೊಂದಿಗೆ ಆಸ್ಪತ್ರೆಗೆ ಬಂದಿದ್ದಳು. ವೈದ್ಯರನ್ನು ಭೇಟಿಯಾದ ಬಳಿಕ ತಾಯಿ ಔಷಧಿ ಖರೀದಿಸಲೆಂದು ತೆರಳಿದ ಸಂದರ್ಭದಲ್ಲಿ ಅಲ್ಲಿಗೆ ತಲುಪಿದ  ಆರೋಪಿ ಲಿಫ್ಟ್ ತೋರಿಸಿಕೊಡುವುದಾಗಿ ತಿಳಿಸಿ ಬಾಲಕಿಯನ್ನು ಕರೆದೊಯ್ದು ಕಿರುಕುಳ ನೀಡಲು ಯತ್ನಿಸಿದ್ದಾನೆಂದು ದೂರಲಾಗಿದೆ. ಬಳಿಕ ತಾಯಿ ಮರಳಿ ಬಂದಾಗ ಘಟನೆ ತಿಳಿದು ಬಂದಿದೆ. ಅನಂತರ ಆ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಪೊಲೀಸರು ಆಸ್ಪತ್ರೆ ಹಾಗೂ ಲಿಫ್ಟ್‌ನ ಸಿಸಿ ಟಿವಿ ಕ್ಯಾಮರಾಗಳ ಹಾರ್ಡ್ ಡಿಸ್ಕ್ ಕಸ್ಟಡಿಗೆ ತೆಗೆದು ಪರಿಶೀಲಿಸಿದಾಗ ಆರೋಪಿಯ ಚಿತ್ರ ಪತ್ತೆಯಾಗಿದೆ. ಆ ಚಿತ್ರವನ್ನು ಪೊಲೀಸರು ಎಲ್ಲಾ ಪೊಲೀಸ್ ಠಾಣೆಗಳಿಗೂ ಕಳುಹಿಸಿಕೊಟ್ಟಿದ್ದರು. ಬಳಿಕ ನಡೆಸಿದ ತನಿಖೆಯಲ್ಲಿ  ಆರೋಪಿಯನ್ನು ಪತ್ತೆಹಚ್ಚಿ ಸೆರೆಹಿಡಿಯಲಾಗಿದೆ.

RELATED NEWS

You cannot copy contents of this page