ಇಂದು ಆಳೆತ್ತರದ ಅಲೆ ಏಳುವ ಸಾಧ್ಯತೆ: ರಾಜ್ಯಾದ್ಯಂತ ಕರಾವಳಿ ಪ್ರದೇಶದಲ್ಲಿ ರೆಡ್ ಅಲರ್ಟ್
ಕಾಸರಗೋಡು: ಬಿಸಿಲ ಧಗೆಗೆ ಈಗ ಸಮುದ್ರದ ನೀರು ಕೂಡಾ ಕುದಿಯುವ ಸ್ಥಿತಿಗೆ ತಲುಪಿದೆ. ಇದು ಸಾಗರದಲ್ಲಿ ಮತ್ಸ್ಯ ಸಂಪತ್ತನ್ನು ಭಾರೀ ಪ್ರಮಾಣದಲ್ಲಿ ಕುಸಿಯುವಂತೆಯೂ ಮಾಡಿದೆ. ಇದು ಮಾತ್ರವಲ್ಲ ಇಂದು ಸಮುದ್ರದಲ್ಲಿ ಬೃಹತ್ ಆಳೆತ್ತರದ ಅಲೆಗಳು ಎದ್ದೇಳಲಿದ್ದು ಆ ಹಿನ್ನೆಲೆಯಲ್ಲಿ ರಾಜ್ಯದ ಕರಾವಳಿ ಪ್ರದೇಶಗಳಲ್ಲಿ ಕೇಂದ್ರ ಹವಾಮಾನ ಇಲಾಖೆ ಮತ್ತು ರಾಜ್ಯ ಮೀನುಗಾರಿಕಾ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಸಮುದ್ರ ಕರಾವಳಿ ಪ್ರದೇಶ ನಿವಾಸಿಗಳು ಇಲಾಖೆ ನೀಡುವ ನಿರ್ದೇಶ ಪ್ರಕಾರ ಅವರ ವಾಸವನ್ನು ತಾತ್ಕಾಲಿಕವಾಗಿ ಅಗತ್ಯ ಬಂದಲ್ಲಿ ಬೇರೆಡೆ ಸ್ಥಳಾಂತರಿಸಬೇಕು. ಮೀನುಗಾರಿಕೆಗೆ ಬೆಸ್ತರು ಇಂದು ಸಂಜೆ ಬಳಿಕ ಸಮುದ್ರಕ್ಕಿಳಿಯಬಾರದು. ಮೀನು ಗಾರಿಕಾ ದೋಣಿ ಇತ್ಯಾದಿಗಳನ್ನು ಸುರಕ್ಷಿತ ತಾಣಗಳಲ್ಲಿ ಕಟ್ಟಿಡಬೇಕು. ಜನರ ಬೀಚ್ ಸಂದರ್ಶನಕ್ಕೆ ಇಂದು ನಿಷೇಧ ಹೇರಲಾಗಿದೆ. ಸಂಭಾವ್ಯ ಅನಾಹುತಗಳನ್ನು ತಪ್ಪಿಸಲು ಮೀನುಗಾರಿಕಾ ಇಲಾಖೆ, ಕರಾವಳಿ ಪೊಲೀಸರು, ಲೋಕಲ್ ಪೊಲೀಸರು ಮತ್ತು ಕಂದಾಯ ಇಲಾಖೆಯವರು ಎಲ್ಲೆಡೆ ತೀವ್ರ ನಿಗಾ ಇರಿಸತೊಡಗಿದ್ದಾರೆ.
ರಾಜ್ಯದಲ್ಲಿ ಉಷ್ಣ ಅಲೆ ಇನ್ನೂ ಮುಂದುವರಿಯುತ್ತಿದ್ದು ಈ ಮಧ್ಯೆ ಮೇ ೬ರಿಂದ ರಾಜ್ಯದ ಹಲವೆಡೆಗಳಲ್ಲಿ ಬೇಸಿಗೆ ಮಳೆ ಸುರಿಯುವ ಸಾಧ್ಯತೆಯೂ ಇದೆಯೆಂದು ಹವಾಮಾನ ಇಲಾಖೆ ತಿಳಿಸಿದೆ. ಉರಿ ಉಷ್ಣಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಾಗಿ ಕಳೆದ ಎರಡು ತಿಂಗಳಲ್ಲಾಗಿ ನೂರು ಕೋಟಿ ರೂ.ಗಳ ಕೃಷಿ ನಾಶನಷ್ಟವುಂಟಾಗಿದೆಯೆಂದು ಕೃಷಿ ಇಲಾಖೆಯ ಪ್ರಾಥಮಿಕ ವರದಿಯಲ್ಲಿ ತಿಳಿಸಲಾಗಿದೆ. ಭತ್ತ, ಬಾಳೆ, ತರಕಾರಿ, ಕಾಳುಮೆಣಸು, ಕಾಫಿ, ಕೊಕ್ಕೊ, ಏಲಕ್ಕಿ ಇತ್ಯಾದಿಗಳೇ ಹೆಚ್ಚಾಗಿ ಈ ಅವಧಿಯಲ್ಲಿ ನಾಶಗೊಂಡಿದೆ.
ಬೇಸಿಗೆ ಧಗೆ ರಾಜ್ಯದಲ್ಲಿ ಬರದ ಪ್ರತೀತಿ ಸೃಷ್ಟಿಸಿದೆಯೆಂದು ಕೃಷಿ ಇಲಾಖೆ ಹೇಳಿದೆ. ಬಿಸಿಲ ಬೇಗೆಯಿಂದ ಉಂಟಾದ ಕೃಷಿ ನಾಶನಷ್ಟಗಳ ಬಗ್ಗೆ ಸಮಗ್ರ ಅಧ್ಯಯನ ನಡೆಸಲು ಸರಕಾರ ತಜ್ಞರನ್ನೊಳಗೊಂಡ ಸಮಿತಿ ರಚಿಸಿದೆ. ಈ ಸಮಿತಿ ಕೃಷಿನಾಶ ಉಂಟಾದ ಸ್ಥಳಗಳಿಗೆ ನೇರವಾಗಿ ಸಂದರ್ಶಿಸಿ ಮಾಹಿತಿ ಸಂಗ್ರಹಿಸಲಿದೆ.
ಬಿಸಿಲ ಝಳಕ್ಕೆ ರಾಜ್ಯದಲ್ಲಿ 497 ಜಾನುವಾರುಗಳು ಪ್ರಾಣ ಕಳೆದುಕೊಂಡಿವೆಯೆಂದು ರಾಜ್ಯ ಪಶುಸಂಗೋಪನಾ ಇಲಾಖೆ ಸರಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ. ಬಿಸಿಲ ಬೇಗೆ ಸಹಿಸಲಾರದೆ ಇಷ್ಟೊಂದು ಸಂಖ್ಯೆಯ ಜಾನುವಾರುಗಳು ಬಲಿಯಾಗುತ್ತಿರುವುದು ಕೇರಳದ ಇತಿಹಾಸದಲ್ಲೇ ಇದು ಮೊದಲು ಎಂದು ಹೈನುಗಾರಿಕಾ ಇಲಾಖೆಯ ಅಧಿಕಾರಿಗಳೂ ಹೇಳುತ್ತಿದ್ದಾರೆ. ಅತೀ ಹೆಚ್ಚು ಎಂಬಂತೆ ಕೊಲ್ಲಂ ಜಿಲ್ಲೆಯಲ್ಲಿ 105 ಜಾನುವಾರುಗಳು ಸತ್ತಿವೆ. ಕಾಸರಗೋಡಿನಲ್ಲೂ ಇದರ ಪರಿಣಾಮ ಬೀರತೊಡಗಿದೆ. ತಾಪಮಾನ ಮಟ್ಟದಲ್ಲಿ ಉಂಟಾಗುತ್ತಿರುವ ಏರಿಕೆ ರಾಜ್ಯದಲ್ಲಿ ದೈನಂದಿನ ಹಾಲು ಉತ್ಪಾದನೆಯಲ್ಲಿ 6.5 ಲಕ್ಷ ಲೀಟರ್‌ನಷ್ಟು ಕುಸಿತವು ಂಟಾಗಿದೆಯೆಂದು ಹೈನುಗಾರಿಕಾ ಇಲಾಖೆ ಹೇಳಿದೆ. ಆದ್ದರಿಂದ ಜಾನುವಾರು ಸೇರಿದಂತೆ ಸಾಕುಪ್ರಾಣಿಗಳ ಬಗ್ಗೆಯೂ ಮಾಲಕರು ಗರಿಷ್ಠ ಜಾಗ್ರತೆ ವಹಿಸಬೇಕು. ಅವುಗಳಿಗೆ ಸೇವಿಸಲು ಅಗತ್ಯದ ನೀರು, ಆಹಾರವನ್ನು ಪದೇ ಪದೇ ನೀಡಬೇಕೆಂದು ಅಧಿಕಾರಿಗಳು ಹೇಳಿದ್ದಾರೆ.