ಉದ್ಯಮಿಯ ಕೊಲೆ: ಲಪಟಾಯಿಸಿದ ಚಿನ್ನಕ್ಕಾಗಿ ಶೋಧ ಮುಂದುವರಿಕೆ; ಮತ್ತೆ 48 ಪವನ್ ಚಿನ್ನ ಪತ್ತೆ
ಕಾಸರಗೋಡು: ಪಳ್ಳಿಕ್ಕೆರೆ ಪೂಚಕ್ಕಾಡ್ ಫಾರುಕಿ ಮಸೀದಿ ಬಳಿಯ ಬೈತುಲ್ ಮಂಜಿಲ್ ನಿವಾಸಿ ಹಾಗೂ ಗಲ್ಫ್ ಉದ್ಯಮಿಯಾಗಿದ್ದ ಎಂ.ಸಿ. ಅಬ್ದುಲ್ ಗಫೂರ್ರಿಂದ ಮಂತ್ರವಾದದ ಹೆಸರಲ್ಲಿ 596 ಪವನ್ (4.76 ಕಿಲೋ) ಚಿನ್ನ ಪಡೆದು ಲಪಟಾಯಿಸಿ ಬಳಿಕ ಅವರನ್ನು ಕೊಲೆಗೈದ ಪ್ರಕರಣದಲ್ಲಿ ೪೮ ಪವನ್ ಚಿನ್ನವನ್ನು ತನಿಖಾ ತಂಡ ಮತ್ತೆ ಪತ್ತೆ ಹಚ್ಚಿ ವಶಪಡಿಸಿಕೊಂಡಿದೆ.
ಲಪಟಾಯಿಸಿದ ಚಿನ್ನವನ್ನು ಆರೋಪಿಗಳು ಕಾಸರಗೋಡು ನಗರದ ಮೂರು ಜ್ಯುವೆಲ್ಲರಿಗಳಿಗೆ ಮಾರಾಟ ಮಾಡಿರುವುದಾಗಿ ತನಿಖೆಯಲ್ಲಿ ಸ್ಪಷ್ಟಗೊಂಡಿದೆ. ಅದರಂತೆ ಪೊಲೀಸರು ಆರೋಪಿಗಳನ್ನು ನಿನ್ನೆ ಆ ಚಿನ್ನದಂ ಗಡಿಗಳಿಗೆ ಕರೆದೊಯ್ದು 37 ಪವನ್ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಇದರ ಹೊರತಾಗಿ ಈ ಪ್ರಕರಣದ ಒಂದನೇ ಆರೋಪಿ 11 ಪವನ್ ಚಿನ್ನವನ್ನು ಚಟ್ಟಂಚಾಲಿನ ಸಹಕಾರಿ ಸಂಸ್ಥೆಯೊಂದರಲ್ಲಿ ಅಡವಿರಿಸಿದ್ದು, ಅದನ್ನು ವಶಪಡಿಸಿಕೊಳ್ಳುವ ಕ್ರಮ ಕೈಗೊಂಡಿದ್ದಾರೆ.
ಇದೇ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಈ ಹಿಂದೆ ಎರಡು ಬಾರಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ 29 ಮತ್ತು 26 ಪವನ್ನ ಚಿನ್ನ ಪತ್ತೆಹಚ್ಚಿ ವಶಪಡಿಸಿಕೊಂಡಿದ್ದರು. ಅದಾದ ಬಳಿಕ ಮತ್ತೆ 48 ಪವನ್ನ ಚಿನ್ನ ವಶಪಡಿಸಿಕೊಳ್ಳುವ ಮೂಲಕ ಪೊಲೀಸರು ಈತನಕ ಒಟ್ಟು 92 ಪವನ್ನ ಚಿನ್ನ ವಶಪಡಿಸಿಕೊಂಡಂತಾಗಿದೆ. ಬಾಕಿ ಚಿನ್ನದ ಪತ್ತೆಗಾಗಿರುವ ಕಾರ್ಯಾಚರಣೆಯನ್ನು ಮುಂದುವರಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಲಪಟಾಯಿಸಿದ ಚಿನ್ನ ಪತ್ತೆಹಚ್ಚುವ ಸಲುವಾಗಿ ನ್ಯಾಯಾಂಗ ಬಂಧನದಲ್ಲಿರುವ ಪ್ರಕರಣದ ನಾಲ್ವರು ಆರೋಪಿಗಳನ್ನು ನ್ಯಾಯಾಲಯದ ಅನುಮತಿ ಪ್ರಕಾರ ತನಿಖಾ ತಂಡಕ್ಕೆ ಬಿಟ್ಟುಕೊಡಲಾಗಿತ್ತು. ಆ ಮೂರು ದಿನಗಳ ಅವಧಿ ಇಂದು ಕೊನೆಗೊಳ್ಳಲಿದೆ. ಇದರಿಂದಾಗಿ ಬಾಕಿ ಉಳಿದಿರುವ ಚಿನ್ನದ ಪತ್ತೆಗಾಗಿ ಆರೋಪಿಗಳನ್ನು ಹೆಚ್ಚುವರಿಯಾಗಿ ಇನ್ನೂ 15 ದಿನಗಳ ತನಕ ಮತ್ತೆ ತಮ್ಮ ಕಸ್ಟಡಿಗೆ ನೀಡುವಂತೆ ಕೋರಿ ಹೊಸದುರ್ಗ ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯ (ದ್ವಿತೀಯ)ಕ್ಕೆ ಪುನಃ ಅರ್ಜಿ ಸಲ್ಲಿಸಲಾಗುವುದೆಂದು ಈ ಪ್ರಕರಣದ ತನಿಖೆ ನಡೆಸುತ್ತಿರುವ ಡಿಸಿಆರ್ಬಿ ಡಿವೈಎಸ್ಪಿ ಕೆ.ಜೆ. ಜೋನ್ಸನ್ ತಿಳಿಸಿದ್ದಾರೆ. ಇನ್ನೊಂದೆಡೆ ಆರೋಪಿಗಳು ಜಾಮೀನು ಕೋರಿ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಅದರ ವಿರುದ್ಧವೂ ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
೨೦೨೩ ಎಪ್ರಿಲ್ ೧೪ರಂದು ಮುಂಜಾನೆ ಅಬ್ದುಲ್ ಗಫೂರ್ ಹಾಜಿ ಇನ್ನು ತಮ್ಮ ಮನೆಯಲ್ಲೇ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ನಂತರ ನಡೆಸಿದ ತನಿಖೆಯಲ್ಲಿ ಅದು ಕೊಲೆಯಾಗಿತ್ತೆಂಬುದು ಸ್ಪಷ್ಟಗೊಂಡಿತ್ತು.
ಬಾರಾ ಮೀತ್ತಲ್ ಮಾಂಙಾಡ್ ಕುಳಿಕುನ್ನು ನಲ್ಲಿ ವಾಸಿಸುತ್ತಿರುವ ಮೂಲತಃ ಮಧೂರು ಉಳಿಯತ್ತಡ್ಕ ನ್ಯಾಷನಲ್ ನಗರ ತುರ್ತಿ ನಿವಾಸಿ ಟಿ.ಎಂ. ಉಬೈಸ್ (ಉಮೈಸ್-32), ಆತನ ಪತ್ನಿ ಮಂತ್ರವಾದಿನಿ ಕೆ.ಎಚ್. ಶಮೀನ (34), ಪೂಚಕ್ಕಾಡ್ ನ ಪಿ.ಎಂ. ಅಸ್ನಿಫ್ (36) ಮತ್ತು ಮಧೂರು ಕೊಲ್ಯ ನಿವಾಸಿ ಆಯಿಷಾ (43) ಎಂಬವರು ಈ ಪ್ರಕರಣದ ಆರೋಪಿಗಳಾಗಿದ್ದಾರೆ.