ಉಪ್ಪಳದಲ್ಲಿ ಮತ್ತೆ ಕೊಟೇಶನ್ ಆಕ್ರಮಣ: ಯುವಕನಿಗೆ ಹಲ್ಲೆಗೈದು ವೀಡಿಯೋ ತೆಗೆದು ಕಾರು, ಫೋನ್, ಪರ್ಸ್ ಸಹಿತ ಪಾರಾದ ತಂಡದ ವಿರುದ್ಧ ಕೇಸು
ಉಪ್ಪಳ: ಅಲ್ಪ ಬಿಡುವಿನ ಬಳಿಕ ಉಪ್ಪಳದಲ್ಲಿ ಮತ್ತೆ ಕೊಟೇಶನ್ ತಂಡ ದಾಳಿ ನಡೆಸಿದೆ. ಯುವಕನಿಗೆ ಹಲ್ಲೆಗೈದು ಗಾಯಗೊಳಿಸಿ ಆತನನ್ನು ನಗ್ನವಾಗಿಸಿ ವೀಡಿಯೋ ಚಿತ್ರೀಕರಣ ನಡೆಸಲಾಗಿದೆ. ಅಲ್ಲದೆ ಪರ್ಸ್, ಮೊಬೈಲ್ ಫೋನ್, ಕಾರು ಸಹಿತ ಪರಾರಿಯಾದ ತಂಡ ಹಣದ ಬೇಡಿಕೆ ಮುಂದಿರಿಸಿ ಬೆದರಿಕೆಯೊಡ್ಡಿದೆ. ಈ ಬಗ್ಗೆ ಯುವಕ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಮೊಗ್ರಾಲ್ ಪುತ್ತೂರು ಬಳ್ಳೂರು ಬಿ.ಎಂ. ಹೌಸ್‌ನ ಶಹಲಾಬತ್ತ್ (26) ನೀಡಿದ ದೂರಿನಂತೆ ಉತ್ತ್ತು, ಹನ್ಸಿ, ಮುಬೀನ್, ರಯೀಸ್ ಎಂಬಿವರ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ.
2024 ಡಿಸೆಂಬರ್ 23ರಂದು ಮಧ್ಯಾಹ್ನ 12 ಗಂಟೆ ಹಾಗೂ ರಾತ್ರಿ 10 ಗಂಟೆ ಮಧ್ಯೆ ಘಟನೆ ನಡೆದಿದೆ. ವ್ಯಾಪಾರದ ಕುರಿತು ಮಾತನಾಡಲಿಕ್ಕಿದೆ ಎಂದು ತಿಳಿಸಿ ಹನ್ಸಿ ಎಂಬಾತ ಶಹಲಾಬತ್ತ್‌ರನ್ನು ಉಪ್ಪಳ ಮಣಿಮುಂಡಕ್ಕೆ ಕರೆಸಿದ್ದನೆಂದು ದೂರಿನಲ್ಲಿ ತಿಳಿಸಲಾಗಿದೆ. ಅಲ್ಲಿಗೆ ತಲುಪಿದಾಗ ಇಬ್ಬರು ವ್ಯಕ್ತಿಗಳು ದೂರುದಾರನನ್ನು ಕಾರಿನಿಂದ ಹೊರಗೆ ಎಳೆದು ಹಾಕಿ ಹಲ್ಲೆಗೈದು ನಗ್ನ ಗೊಳಿಸಿದ ಬಳಿಕ ವೀಡಿಯೋ ಚಿತ್ರೀ ಕರಿಸಿರುವುದಾಗಿ ದೂರಿನಲ್ಲಿ ತಿಳಿಸ ಲಾಗಿದೆ. ಅನಂತರ ತಂಡ ಕಾರು, ಪರ್ಸ್, ಮೊಬೈಲ್ ಸಹಿತ ಅಲ್ಲಿಂದ ಪರಾರಿಯಾಗಿದೆ. ನಗ್ನ ವೀಡಿಯೋ ಪ್ರಚಾರ ಮಾಡದಿರಬೇಕಾದರೆ ಹಣ ನೀಡಬೇಕೆಂದು ಒತ್ತಾಯಿಸಿ ತಂಡ ಬೆದರಿಕೆಯೊಡ್ಡಿದ ಹಿನ್ನೆಲೆಯಲ್ಲಿ ಶಹಲಾಬತ್ತ್ ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿಗಳ ಪತ್ತೆಗಾಗಿ ತನಿಖೆ ತೀವ್ರಗೊಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.