ಎಡರಂಗ ಸರಕಾರದ ಭ್ರಷ್ಟಾಚಾರ, ದುಂದುವೆಚ್ಚದಿಂದ ಕೇರಳ ನಾಶ-ಟಿ.ಎನ್. ಪ್ರತಾಪನ್
ಕಾಸರಗೋಡು: ಭ್ರಷ್ಟಾಚಾರ, ದುಂದುವೆಚ್ಚದಿಂದ ಮುಳುಗಿ ಹೋದ ಪಿಣರಾಯಿ ವಿಜಯನ್ ಸರಕಾರಕ್ಕೆ ಸಂರಕ್ಷಣೆಯ ಗೋಡೆ ಕಟ್ಟುತ್ತಿರುವುದು ಕೇಂದ್ರದ ನರೇಂದ್ರ ಮೋದಿ ಸರಕಾರ ವಾಗಿದೆಯೆಂದು ಕೆಪಿಸಿಸಿ ಕಾರ್ಯಾ ಧ್ಯಕ್ಷ ಟಿ.ಎನ್. ಪ್ರತಾಪನ್ ನುಡಿದರು. ಜಿಲ್ಲಾ ಕಾಂಗ್ರೆಸ್ ಸಮಿತಿ ಕಾಸರಗೋಡು ನಗರಸಭಾ ಮಿನಿ ಕಾನ್ಫರೆನ್ಸ್ ಸಭಾಂಗಣದಲ್ಲಿ ಆಯೋಜಿಸಿದ ಡಿಸಿಸಿ ನೇತ್ ಸಂಗಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕೋಮುವಾದ, ಅಕ್ರಮ ರಾಜಕೀಯದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿರುವ ರಾಜಕೀಯ ನೀತಿ ಕೇರಳ ಜನತೆಗೆ ಆಪತ್ತು ತಂದೊಡ್ಡಲಿದೆಯೆಂದು ಅವರು ನೆನಪಿಸಿದರು. ಪಿಣರಾಯಿ ವಿಜಯನ್ ಸರಕಾರದ ಒಂಭತ್ತು ವರ್ಷದ ಆಡಳಿತದಿಂದ ಕೇರಳ ನಾಶವಾಗಿದೆ. ಆಶಾ ಕಾರ್ಯಕರ್ತೆಯರು, ಅಂಗನವಾಡಿ ನೌಕರರು, ಕ್ಷೇಮ ಪಿಂಚಣಿಯಿಂದ ಬದುಕನ್ನು ಸವೆಸುತ್ತಿರುವ ಜನರು ಸಹಿತ ಜನಸಾಮಾನ್ಯರನ್ನು ಅವಗಣಿಸಿ ಕಾರ್ಪರೇಟರ್‌ಗಳನ್ನು ಸಂರಕ್ಷಿಸುವ ಉದ್ದೇಶವಿಟ್ಟುಕೊಂಡು, ಕೇಂದ್ರ-ಕೇರಳ ಸರಕಾರಗಳು ಮುಂದುವರಿಯುತ್ತಿದೆ ಎಂದು ಅವರು ಆಪಾದಿಸಿದರು. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಮಾತನಾಡಿದರು. ಡಿಸಿಸಿ ಅಧ್ಯಕ್ಷ ಪಿ.ಕೆ. ಫೈಸಲ್ ಅಧ್ಯಕ್ಷತೆ ವಹಿಸಿದರು. ಹಕೀಂ ಕುನ್ನಿಲ್, ಎ. ಗೋವಿಂದನ್ ನಾಯರ್, ಕೆ. ನೀಲಕಂಠನ್, ಪಿ.ಎ. ಅಶ್ರಫಲಿ, ಕೆ.ವಿ. ಗಂಗಾಧರನ್, ಸುಬ್ಬಯ್ಯ ರೈ ಸಹಿತ ಹಲವಾರು ಮಂದಿ ಮುಖಂಡರು ಮಾತನಾಡಿದರು.