ಎರಡು ಮನೆಗಳಿಗೆ ನುಗ್ಗಿ ಅಡಿಕೆ, ಚಿನ್ನಾಭರಣ ಕಳವುಗೈದ ಆರೋಪಿ ಸೆರೆ

ಕುಂಬಳೆ: ಎರಡು ಮನೆಗಳ  ಬಾಗಿಲು ಮುರಿದು ಒಳನುಗ್ಗಿ  ಅಡಿಕೆ, ಚಿನ್ನಾಭರಣ ಹಾಗೂ   ವಿವಿಧ ಸಾಮಗ್ರಿಗಳನ್ನು ಕಳವುಗೈದ ಆರೋಪಿಯನ್ನು ಕುಂಬಳೆ ಪೊಲೀ ಸರು ಬಂಧಿಸಿದ್ದಾರೆ. ಕರ್ನಾಟಕದ ವಿಟ್ಲ ಸಾಲೆತ್ತೂರು ಕೊಡ್ಲಮೊಗರುವಿನ ಮೊಹಮ್ಮದ್ ಜಾಬೀರ್ (37) ಎಂಬಾತನನ್ನು ಕುಂಬಳೆ ಎಸ್‌ಐ ಕೆ.ಆರ್. ಉಮೇಶ್ ನೇತೃತ್ವದಲ್ಲಿ ಸೆರೆಹಿಡಿಯಲಾಗಿದೆ.  ಕಳೆದ ಅಗೋಸ್ತ್ ೩ರಂದು ರಾತ್ರಿ ಮಣಿ ಯಂಪಾರೆ ದಾರುಲ್ ಮೊಫಾಸ್ ಮಂಜಿಲ್‌ನ ಅಬ್ದುಲ್ ಲತೀಫ್‌ರ ಪತ್ನಿ  ಫಾತಿಮತ್ ಸುಮೈನರ ಮನೆಯ ಬಾಗಿಲು ಮುರಿದು  ಒಳನುಗ್ಗಿ ನಾಲ್ಕೂವರೆ ಕ್ವಿಂಟಾಲ್ ಅಡಿಕೆ, ಟಿವಿ, ಕ್ಯಾಮರಾ, ಟ್ಯಾಬ್ ಮೊದಲಾದ ಇಲೆಕ್ಟ್ರೋನಿಕ್ ಸಾಮಗ್ರಿಗಳನ್ನು ಕಳವುಗೈದ ಘಟನೆ ನಡೆದಿತ್ತು. ಈ ಪ್ರಕರಣದಲ್ಲಿ ಕೇಸು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಆರೋಪಿಯ ಕುರಿತು ಮಾಹಿತಿ ಲಭಿಸಿದೆ.  ಇದರಂತೆ ನಿನ್ನೆ ಪೊಲೀಸರು ನಡೆಸಿದ ಕಾರ್ಯಾಚರ ಣೆಯಲ್ಲಿ ಆರೋಪಿಯನ್ನು ಸೆರೆಹಿಡಿ ದು ಕುಂಬಳೆಗೆ ತಲುಪಿಸಲಾಗಿದೆ.  ಈತನನ್ನು ತನಿಖೆಗೊಳಪಡಿಸಿದಾಗ ನೆಕ್ರಾಜೆ ಚೇಡಿಕ್ಕಾನದ  ನಬೀಸ ಎಂಬವರ ಮನೆಯಿಂದ ೧೫ ಪವನ್ ಚಿನ್ನಾಭರಣ ಕಳವುಗೈದಿರುವುದು ಈತನಾಗಿದ್ದಾನೆಂದು ತಿಳಿದುಬಂದಿದೆ. ಇತ್ತೀಚೆಗೆ ನಬೀಸ ಹಾಗೂ ಮಕ್ಕಳು  ತಳಂಗರೆಯಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದರು. ಮರುದಿನ ಬೆಳಗ್ಗೆ ಅವರು ಮರಳಿ ಬಂದಾಗ ಮನೆಯ ಬಾಗಿಲು ಮುರಿದ ಸ್ಥಿತಿಯಲ್ಲಿ ಕಂಡುಬಂದಿದೆ.   ಒಳಗೆ ಪ್ರವೇಶಿಸಿ ನೋಡಿದಾಗ ಕಪಾಟಿನಲ್ಲಿದ್ದ ಚಿನಾಭರಣ ನಾಪತ್ತೆಯಾಗಿತ್ತು. ಈ ಬಗ್ಗೆಯೂ ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಂತೆ ಆರೋಪಿ ಸೆರೆಗೀಡಾಗಿದ್ದಾನೆ. 

ಚೇಡಿಕ್ಕಾನದ ಮತ್ತೆರಡು ಮನೆಗಳಿಂದಲೂ ಅಂದು ರಾತ್ರಿ ಕಳವು ಯತ್ನ ನಡೆದಿತ್ತು. ಈ ಕಳವು ಕೃತ್ಯದಲ್ಲಿ  ಮೊಹಮ್ಮದ್ ಜಾಬೀರ್‌ನೊಂದಿಗೆ ಮತ್ತಿಬ್ಬರು ಆರೋಪಿಗಳು ಪಾಲ್ಗೊಂಡಿದ್ದಾರೆಂದು ತಿಳಿದುಬಂದಿದೆ. ಅವರಿಗಾಗಿ ಶೋಧ ನಡೆಸಲಾಗುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ. 

You cannot copy contents of this page