ಎರಡು ವರ್ಷದ ಬಾಲಕಿಯ ಅಪಹರಣ: ರೈಲ್ವೇ ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಮಗುವಿನ ಸಹಿತ ಆರೋಪಿ ಸೆರೆ
ಕಾಸರಗೋಡು: ಮಂಗಳೂರಿ ನಿಂದ ಅಪಹರಿಸಲಾದ ಎರಡು ವರ್ಷ ಪ್ರಾಯದ ಹೆಣ್ಣು ಮಗುವನ್ನು ಕಾಸರಗೋಡು ರೈಲ್ವೇ ಪೊಲೀಸರು ಮತ್ತ್ತು ರೈಲ್ವೇ ಭದ್ರತಾ ಪಡೆ (ಆರ್ಪಿಎಫ್) ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ರೈಲಿನಿಂದ ಪತ್ತೆ ಹಚ್ಚಿ ವಶಪಡಿಸಿಕೊಂಡು ಆ ಮಗುವನ್ನು ಅಪಹರಿಸಿದ ವ್ಯಕ್ತಿಯನ್ನು ಬಂಧಿಸಿದ ಘಟನೆ ಕಾಸರಗೋಡು ರೈಲು ನಿಲ್ದಾಣದಲ್ಲಿ ನಡೆದಿದೆ. ಎರ್ನಾಕುಳಂ ಜಿಲ್ಲೆಯ ಪರಾವೂರು ತಡಪಿಳ್ಳಿ ಮುಟ್ಟವಯಲ್ ಕಂಡತ್ತಿಲ್ ಹೌಸಿನ ಅನೀಶ್ ಕುಮಾರ್ (49) ಬಂಧಿತ ಆರೋಪಿ.
ಮಂಗಳೂರು ಪಡೀಲ್ನಲ್ಲಿ ವಾಸಿಸುತ್ತಿರುವ ಕಾರ್ಮಿಕ ದಂ ಪತಿಯ ಎರಡು ವರ್ಷದ ಹೆಣ್ಣು ಮಗು ಮೊನ್ನೆ ಸಂಜೆ ಅಲ್ಲೇ ಪಕ್ಕ ಆಟವಾಡುತ್ತಿದ್ದ ವೇಳೆ ದಿಢೀರ್ ನಾಪತ್ತೆಯಾಗಿತ್ತು. ಇದರಿಂದ ಗಾಬರಿ ಗೊಂಡ ಬಾಲಕಿಯ ಹೆತ್ತವರು ಕಂಕನಾಡಿ ಪೊಲೀಸರಿಗೆ ದೂರು ನೀಡಿದ್ದಾರೆ. ತಕ್ಷಣ ಕಾರ್ಯನಿರತರಾದ ಪೊಲೀಸರು ಎಲ್ಲಾ ರೈಲು ನಿಲ್ದಾಣಗಳು ಹಾಗೂ ಪೊಲೀಸ್ ಠಾಣೆಗಳಿಗೆ ಈ ಬಗ್ಗೆ ಮಾಹಿತಿ ರವಾನಿಸಿದ್ದಾರೆ. ಈ ಮಧ್ಯೆ ಪೊಲೀಸರು ಮಂಗಳೂರು ರೈಲು ನಿಲ್ದಾಣದ ಸಿಸಿಟಿವಿ ಕ್ಯಾಮರಾಗಳ ದೃಶ್ಯಗಳನ್ನು ಪರಿಶೀಲಿಸಿದಾಗ ಓರ್ವ ವ್ಯಕ್ತಿ ಮಗುವನ್ನು ಹೊತ್ತುಕೊಂಡು ರೈಲಿಗೇರುವುದನ್ನು ಕಂಡಿದ್ದಾರೆ. ತಕ್ಷಣ ಕಂಕನಾಡಿ ಪೊಲೀಸರು ಆ ಬಗ್ಗೆ ಕಾಸರಗೋಡು ರೈಲ್ವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಆ ಕೂಡಲೇ ಕಾರ್ಯನಿರತರಾದ ಕಾಸರಗೋಡು ರೈಲ್ವೇ ಪೊಲೀಸರು ಮತ್ತು ರೈಲ್ವೇ ಭದ್ರತಾ ಪಡೆ ಮೊನ್ನೆ ರಾತ್ರಿ ಮಂಗಳೂರು ಭಾಗದಿಂದ ಕಾಸರಗೋಡಿಗೆ ಬಂದ ಗಾಂಧಿ ದಾಮ್- ನಾಗರ್ಕೋವಿಲ್ ಎಕ್ಸ್ಪ್ರೆಸ್ ರೈಲಿನೊಳಗೆ ಶೋಧ ನಡೆಸಿದಾಗ ಅದರ ಜನರಲ್ ಬೋಗಿಯಲ್ಲಿ ಆರೋಪಿ ಅನೀಶ್ ಕುಮಾರ್ ಮಗುವನ್ನು ಹೊತ್ತುಕೊಂಡು ಕುಳಿತಿರುವುದನ್ನು ಕಂಡಿದ್ದಾರೆ. ತಕ್ಷಣ ಆತನನ್ನು ಮಗುವಿನ ಸಹಿತ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ನಂತರ ಆ ಬಗ್ಗೆ ಚೈಲ್ಡ್ಲೈನ್ನವರಿಗೂ, ಕಂಕ ನಾಡಿ ಪೊಲೀಸರಿಗೂ ಮಾಹಿತಿ ನೀ ಡಿದ್ದಾರೆ. ಅದರಂತೆ ಕಂಕನಾಡಿ ಪೊಲೀಸರು ಕಾಸರಗೋಡಿಗೆ ಆಗಮಿಸಿ ಬಳಿಕ ಅವರಿಗೆ ಮಗು ಮತ್ತು ಆರೋಪಿಯನ್ನು ಹಸ್ತಾಂತರಿಸಿದರು.
ಮಗುವನ್ನು ಪತ್ತೆಹಚ್ಚಿ ಆರೋಪಿಯನ್ನು ಸೆರೆ ಹಿಡಿದ ರೈಲ್ವೇ ಪೊಲೀಸರ ತಂಡದಲ್ಲಿದ್ದ ಕಾಸರಗೋಡು ರೈಲ್ವೇ ಪೊಲೀಸ್ ಠಾಣೆಯ ಎಸ್ಐಗಳಾದ ರೆಜಿ ಕುಮಾರ್, ಸನಲ್ ಕುಮಾರ್, ಎಎಸ್ಐ ವೇಣುಗೋಪಾಲ್, ಸಿಪಿಒಗಳಾದ ಸೋಮನ್, ಪ್ರದೀಪ್ ಕುಮಾರ್, ಆರ್.ಪಿ.ಎಫ್ನ ಎಎಸ್ಐ ವಿನೋದ್, ರಾಜೀವನ್, ಪ್ರಭಾಕರನ್ ಮತ್ತು ಶ್ರೀರಾಜ್ ಎಂಬವರು ಒಳಗೊಂಡಿದ್ದರು. ಬಂಧಿತ ಆರೋಪಿ ವಿರುದ್ಧ ಕಂಕನಾಡಿ ಪೊಲೀಸರು ಅಪಹರಣ ಪ್ರಕರಣ ದಾಖಲಿಸಿಕೊಂಡಿದ್ದು, ನಂತರ ಆತನನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.