ಕಟ್ಟಡದಿಂದ ಕೆಳಕ್ಕೆ ದೂಡಿ ಹಾಕಿ ಗಂಭೀರ ಗಾಯಗೊಂಡಿದ್ದ ವ್ಯಾಪಾರಿ ಸಾವು: ಗುತ್ತಿಗೆದಾರ ಪೊಲೀಸ್ ಕಸ್ಟಡಿಗೆ

ಕಾಸರಗೋಡು: ಕಟ್ಟಡದಿಂದ ಕೆಳಗ್ಗೆ ದೂಡಿ ಹಾಕಿದ ಪರಿಣಾಮ ಕೆಳಕ್ಕೆ ಬಿದ್ದು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ವ್ಯಾಪಾರಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಹೊಸದುರ್ಗ ವೆಳ್ಳಿಕೋತ್ತ್ ಪೇರಳ ನಿವಾಸಿ ಹಾಗೂ ವ್ಯಾಪಾರಿಯೂ ಆಗಿರುವ ರೋಯ್ ಜೋಸೆಫ್ ಎಳುಪ್ಲಾಕ್ಕಲ್ (45) ಸಾವನ್ನಪ್ಪಿದ ವ್ಯಕ್ತಿ.

ಮಾವುಂಗಾಲ್ ಮೂಲಕಂಡದಲ್ಲಿ ರೋಯ್ ಜೋಸೆಫ್ ಹೊಸದಾಗಿ ಮೂರು ಅಂತಸ್ತಿನ ಕಟ್ಟಡವನ್ನು ನಿರ್ಮಿಸುತ್ತಿದ್ದು, ಆಗಸ್ಟ್ ೩ರಂದು ಅವರನ್ನು ಮಧ್ಯಾಹ್ನ ಸುಮಾರು 1.30ರ ವೇಳೆ ರೋಯ್ ಜೋಸೆಫ್‌ರನ್ನು ಆ ಕಟ್ಟಡದ ಮೂರನೇ ಅಂತಸ್ತಿನಿಂದ ಕೆಳಗೆ ದೂಡಿ ಹಾಕಲಾಗಿತ್ತು. ಅದರಿಂದ ಗಂಭೀರ ಗಾಯಗೊಂಡ ರೋಯ್ ಜೋಸೆಫ್‌ರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿ ಉನ್ನತ ಮಟ್ಟದ ಚಿಕಿತ್ಸೆ ನೀಡಲಾಗಿತ್ತು. ಅದು ಫಲಕಾರಿಯಾಗದೆ ಅವರು ಇಂದು ಮುಂಜಾನೆ ಸಾವನ್ನಪ್ಪಿದ್ದಾರೆ.

ಈ ಘಟನೆಗೆ ಸಂಬಂಧಿಸಿ ಪ್ರಸ್ತುತ ಕಟ್ಟಡ ನಿರ್ಮಿಸುತ್ತಿರುವ ಗುತ್ತಿಗೆದಾರ ನಾದ ಪುಲ್ಲೂರು ನಿವಾಸಿ ನರೇಂದ್ರನ್‌ನ ವಿರುದ್ಧ ಹೊಸದುರ್ಗ ಪೊಲೀಸರು ಮೊದಲು ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿದ್ದರು. ರೋಯ್ ಜೋಸೆಫ್ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಆರೋಪಿ ನರೇಂದ್ರನ್‌ರ ವಿರುದ್ಧದ ಈ ಹಿಂದಿನ ಕೇಸನ್ನು ಕೊಲೆ ಪ್ರಕರಣವಾಗಿ ಬದಲಾಯಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ. ಮಾತ್ರವಲ್ಲ ಆತನನ್ನು ಕಸ್ಟಡಿಗೆ ತೆಗೆದು ವಿಚಾರಣೆಗೊಳಪಡಿಸುತ್ತಿದ್ದಾರೆ.

ಹೊಸದುರ್ಗ ಮಡಿಯನ್‌ನಲ್ಲಿ ಅಲ್ಯುಮಿನಿಯಂ ಸಾಮಗ್ರಿ ಮಾರಾಟದಂಗಡಿ ನಡೆಸುತ್ತಿರುವ ರೋಯ್ ಜೋಸೆಫ್ ತನ್ನ ವ್ಯಾಪಾರವನ್ನು ಇನ್ನಷ್ಟು ವಿಸ್ತರಿಸಲು  ಮೂಲಕಂಡದಲ್ಲಿ ಮೂರು ಅಂತಸ್ತಿನ ಕಟ್ಟಡ ನಿರ್ಮಾಣ ಆರಂಭಿಸಿದ್ದರು. ಮೃತರು ಪತ್ನಿ ದಿನ್‌ಸ್ಸಿ ರೋಯ್, ಮಕ್ಕಳಾದ ನೆವಿನ್, ನಿತಿನ್, ನಿಪಿನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page