ಕಡಲ್ಗಳ್ಳರು ಅಪಹರಿಸಿದ ಕಾಸರಗೋಡು ನಿವಾಸಿ ಸೇರಿದಂತೆ 10 ಮಂದಿ ಕೊನೆಗೂ ಬಿಡುಗಡೆ
ಕಾಸರಗೋಡು: ಪಶ್ಚಿಮ ಆಫ್ರಿಕಾದ ರೋಮಾ ಬಂದಿರಿನಿಂದ ಕ್ಯಾಮೂರಾನ್‌ಗೆ ಹೋಗುತ್ತಿದ್ದ ಬಿ2 ರಿವರ್ ಎಂಬ ಹೆಸರಿನ ಸರಕು ಹಡಗನ್ನು ಮಾರ್ಚ್ 17ರಂದು ಕಡಲ್ಗಳ್ಳರು ಅಪಹರಿಸಿ ಅದರಲ್ಲಿದ್ದ ಕಾಸರ ಗೋಡು ಪನಯಾಲ್ ಅಂಬಂಗಾಡ್ ಕೋಟಪಾರಾಯಿ ನಿವಾಸಿ ರಜೀಂದ್ರನ್ ಭಾರ್ಗವನ್ ಸೇರಿದಂತೆ 10 ಮಂದಿ ಯನ್ನು 28 ದಿನಗಳ ಬಳಿಕ ಕೊನೆಗೂ ಒತ್ತೆಸೆರೆಯಿಂದ ಬಿಡುಗಡೆಗೊಳಿಸಲಾಗಿದೆ.
ಕಡಲ್ಗಳ್ಳರ ಒತ್ತೆಸೆರೆಯಿಂದ ಬಿಡುಗಡೆ ಗೊಂಡ ರಜೀಂದ್ರನ್ ಸೇರಿದಂತೆ 10 ಮಂದಿ ಶೀಘ್ರ ಮುಂಬೈಗೆ ಬಂದು ಸೇರಲಿ ದ್ದಾರೆಂದು ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ತಿಳಿಸಿದ್ದಾರೆ. ಮಾತ್ರವಲ್ಲ ಬಿಡುಗಡೆಗೊಂಡ ಬೆನ್ನಲ್ಲೇ ರಜೀಂದ್ರನ್ ತಮ್ಮ ಮನೆಯವರನ್ನು ಫೋನ್ ಮೂಲಕ ಸಂಪರ್ಕಿಸಿದ್ದು, ತಾನು ಶೀಘ್ರ ಮನೆಗೆ ಬಂದು ಸೇರಲಿದ್ದೇನೆಂದು ತಿಳಿಸಿದ್ದಾರೆ. ವಿಷು ದಿನದಂದೇ ಮನೆಯವರಿಗೆ ಈ ಶುಭ ಸಂದೇಶ ಲಭಿಸಿದೆ. ಕಡಲ್ಗಳ್ಳರ ಒತ್ತೆಸೆರೆಯಲ್ಲಿದ್ದವರಲ್ಲಿ ರಜೀಂದ್ರನ್‌ರ ಹೊರತಾಗಿ ಕೇರಳದ ಆಸಿಫ್ ಅಲಿ, ತಮಿಳುನಾಡಿನವರಾದ ಪ್ರದೀಪ್ ಮುರು ಗನ್, ಸತೀಶ್ ಕುಮಾರ್ ಸೆಲ್ವರಾಜ್, ಬಿಹಾರದ ಸಂದೀಪ್ ಕುಮಾರ್ ಸಿಂಗ್, ಮಹಾರಾಷ್ಟ್ರದ ಸಮೀರ್ ಜಾವೇದ್ ಮತ್ತು ಸೋಲ್ಕರ್ ರಿಹಾನ್ ಬಬೀರ್ ಎಂಬವರಲ್ಲದೆ ಮೂವರು ವಿದೇಶೀಯರೂ ಒಳಗೊಂಡಿದ್ದಾರೆ. ಇವರೆಲ್ಲರನ್ನು ಸುರಕ್ಷಿತವಾಗಿ ಬಿಡುಗಡೆಮಾಡಲಾಗಿದೆ. ಕಡಲ್ಗಳ್ಳರು ಅಪಹರಿಸಲ್ಪಟ್ಟವರ ಸುರಕ್ಷಿತ ಬಿಡುಗಡೆಗೆ ಅಗತ್ಯದ ತುರ್ತು ಕ್ರಮ ಕೈಗೊಳ್ಳುವಂತೆ ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಲೋಕಸಭೆಯಲ್ಲಿ ತುರ್ತು ಗೊತ್ತುವಳಿ ಮಂಡಿಸಿ ಆಗ್ರಹಪಟ್ಟಿದ್ದರು. ಅದರ ಫಲವಾಗಿ ಭಾರತ ಸರಕಾರ ಭಾರತೀಯ ರಾಯಭಾರಿ ಕೇಂದ್ರದ ಮೂಲಕ ನಡೆಸಿದ ಸತತ ಪ್ರಯತ್ನದ ಫಲವಾಗಿ ಒತ್ತೆಸೆರೆಗೊಳಗಾ ದವರನ್ನೆಲ್ಲಾ ಸುರಕ್ಷಿತ ಬಿಡುಗಡೆಗೆ ದಾರಿಮಾಡಿಕೊಟ್ಟಿತೆಂದು ಸಂಸದರು ತಿಳಿಸಿದ್ದಾರೆ.
ಇದು ಕಡಲ್ಗಳ್ಳರು ಅಪಹರಿಸಿದ ಪ್ರಕರಣವಾಗಿರುವುದರಿಂದಾಗಿ ಡೈರೆಕ್ಟರ್ ಜನರಲ್ ಆಫ್ ಫಿಶ್ಶಿಂಗ್ ಕಚೇರಿಯಲ್ಲಿ ಈ 10 ಮಂದಿಯನ್ನು ಹಾಜರುಪಡಿಸಿದ ಬಳಿಕವಷ್ಟೇ ಅವರನ್ನು ಊರಿಗೆ ಕಳುಹಿಸಿಕೊಡಲು ಸಾಧ್ಯವೆಂದು ಪ್ರಸ್ತುತ ಹಡಗಿಗೆ ಸಂಬಂಧಪಟ್ಟವರು ತಿಳಿಸಿದ್ದಾರೆ.