ಕಣಜದ ಹುಳು ದಾಳಿ: ವೃದ್ದ ಮೃತ್ಯು
ಮಂಗಲ್ಪಾಡಿ: ನಡೆದು ಹೋಗುತ್ತಿದ್ದ ವೇಳೆ ಕಣಜದ ಹುಳು ಚುಚ್ಚಿ ಚಿಕಿತ್ಸೆಯಲ್ಲಿದ್ದ ವ್ಯಕ್ತಿ ನಿಧನ ಹೊಂದಿದ್ದಾರೆ. ಪುಳಿಕುತ್ತಿ ಸಮೀಪದ ಅಗರ್ತಿಮೂಲೆ ನಿವಾಸಿ ರಾಧಾಕೃಷ್ಣ (62) ನಿನ್ನೆ ಅಪರಾಹ್ನ ನಿಧನ ಹೊಂದಿದ್ದಾರೆ. ಸೋಮವಾರ ಬೆಳಿಗ್ಗೆ ಮನೆಯಿಂದ ನಡೆದು ಹೋಗುತ್ತಿದ್ದಾಗ ಸೋಂಕಾಲು ತಿರುವಿನಲ್ಲಿ ಕಣಜದ ಹುಳು ದಾಳಿ ಮಾಡಿದೆ. ಇವರನ್ನು ಪುತ್ರ ಹಾಗೂ ಸ್ಥಳೀಯರು ಮಂಗಲ್ಪಾಡಿ ಸರಕಾರಿ ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ನೀಡಿ ಮನೆಗೆ ಕರೆತರಲಾಗಿತ್ತು. ವಿಶ್ರಾಂತಿಯಲ್ಲಿದ್ದ ಇವರು ನಿನ್ನೆ ಅಪರಾಹ್ನ ಅಸ್ವಸ್ಥಗೊಂಡಿದ್ದು, ಅಲ್ಪ ಹೊತ್ತಿನಲ್ಲಿ ನಿಧನ ಸಂಭವಿಸಿದೆ. ಮೃತರು ಮಕ್ಕಳಾದ ಸುಮೇಶ್, ಸುಜೀಶ್, ಸೊಸೆ ಪ್ರತೀಕ್ಷಾ, ಸಹೋದರಿ ಲೀಲಾವತಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಪತ್ನಿ ರಾಧಾಮಣಿ ಈ ಹಿಂದೆ ನಿಧನ ಹೊಂದಿದ್ದಾರೆ.
ಮೃತರ ಮನೆಗೆ ಬಿಜೆಪಿ ಮುಖಂಡ ಕೆ.ಪಿ. ವತ್ಸರಾಜ್ ಸಹಿತ ಹಲವಾರು ಮಂದಿ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.