ಕರ್ನಾಟಕ ಬಂದ್: ನೀರಸ ಪ್ರತಿಕ್ರಿಯೆ
ಬೆಂಗಳೂರು: ಕನ್ನಡಿಗರ ಮೇಲೆ ಹಲ್ಲೆ, ದೌರ್ಜನ್ಯ, ಮರಾಠಿ ತಂಡದಿಂದ ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್ ಮೇಲೆ ಹಲ್ಲೆ ಹಾಗೂ ಮೇಕೆದಾಟು ಸೇರಿದಂತೆ ಹಲವು ನೀರಾವರಿ ಯೋಜನೆ ಜ್ಯಾರಿಗೆ ಆಗ್ರಹಿಸಿ ಕನ್ನಡಪರ ಸಂಘಟನೆ ಹೋರಾಟಗಾರ ವಾಟಾಳ್ ನಾಗರಾಜ್ ನೀಡಿರುವ ಅಖಂಡ ಕರ್ನಾಟಕ ಬಂದ್‌ಗೆ ಹಲವೆಡೆಗಳಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಬಂದ್ ಯಾವುದೇ ರೀತಿಯ ಪ್ರಭಾವ ಬೀರಿಲ್ಲ. ಈ ಎರಡೂ ಜಿಲ್ಲೆಗಳಲ್ಲಿ ಸಾರಿಗೆ ಸೇವೆ ಎಂದಿನಂತೆ ನಡೆಯುತ್ತಿದೆ. ಸರಕಾರಿ ಕಚೇರಿಗಳ ಮೇಲೆ ಹಾಗೂ ಜನಜೀವನ ಇಂದು ಎಂದಿನಂತೆ ಸಾಗುತ್ತಿದೆ. ಕರ್ನಾಟಕ ಬಂದ್‌ಗೆ ಕೆಲ ಸಂಘಟನೆಗಳು ಬೆಂಬಲ ಘೋಷಿ ಸಿದ್ದಾರೆ. ಇನ್ನು ಕೆಲ ಸಂಘಟನೆಗಳು ನೈತಿಕ ಬೆಂಬಲ ಮಾತ್ರ ಘೋಷಿಸಿವೆ.
ಬೆಂಗಳೂರು ಮೆಟ್ರೋ ನಿಲ್ದಾಣಕ್ಕೆ ಮುತ್ತಿಗೆ ಹಾಕಿದ ಕನ್ನಡಪರ ಹೋರಾಟಗಾರರನ್ನು ಪೊಲೀಸರು ವಶಕ್ಕೆ ತೆಗೆದಿದ್ದಾರೆ. ಬೆಳಗಾವಿ, ಮಂಡ್ಯ ಮತ್ತು ರಾಮನಗರದಲ್ಲಿ ಬಂದ್‌ಗೆ ಸಂಪೂರ್ಣ ಬೆಂಬಲ ಲಭಿಸಿದೆ. ಮೈಸೂರು, ಬೆಂಗಳೂರು ಮತ್ತಿತರೆಡೆಗಳಲ್ಲಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ಲಭಿಸಿದೆ. ಬಂದ್‌ನ ಹೆಸರಲ್ಲಿ ಮೆರವಣಿಗೆ, ಪ್ರತಿಭಟನೆಗೆ ಅವಕಾಶ ನೀಡಲಾಗುವುದಿಲ್ಲವೆಂದು ಪೊಲೀಸ್ ಇಲಾಖೆ ಮೊದಲೇ ಸ್ಪಷ್ಟಪಡಿಸಿತ್ತು. ಬಲವಂತವಾಗಿ ಬಂದ್ ಮಾಡಿದರೆ ಶಿಸ್ತು ಕ್ರಮ ಕೈಗೊಳ್ಳುವ ಮುನ್ನೆಚ್ಚರಿಕೆ ಯನ್ನು ಪೊಲೀಸ್ ಇಲಾಖೆ ನೀಡಿದೆ.
ಬಂದ್ ದಕ್ಷಿಣಕನ್ನಡ ಜಿಲ್ಲೆ ಯಲ್ಲಿ ಯಾವುದೇ ರೀತಿಯ ಪ್ರಭಾವ ಬೀರದಿರುವ ಹಿನ್ನೆಲೆಯಲ್ಲಿ ಕಾಸರಗೋಡು-ಮಂಗಳೂರು ಹಾಗೂ ಕಾಸರಗೋಡಿನಿಂದ ಕರ್ನಾ ಟಕದ ಇತರ ರೂಟ್‌ಗಳಲ್ಲಿರುವ ಎಲ್ಲಾ ಬಸ್ ಸೇವೆಗಳು ಇಂದು ಎಂದಿನಂತೆ ನಡೆಯುತ್ತಿದೆ.