ಕಾಸರಗೋಡು: ಪೆರಿಯ ಅವಳಿ ಕೊಲೆ ಪ್ರಕರಣದಲ್ಲಿ ಖುಲಾಸೆಗೊಳಿ ಸಲ್ಪಟ್ಟ ಆರೋಪಿಗಳ ಹಾಗೂ ಕಡಿಮೆ ಪ್ರಮಾಣದ ಶಿಕ್ಷೆ ಲಭಿಸಿದ ಆರೋಪಿಗಳ ವಿರುದ್ಧ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಕಾಂಗ್ರೆಸ್ ರಾಜ್ಯ ಘಟಕ ಮುಂದಾಗಿದೆ.
ಈ ಕೊಲೆ ಪ್ರಕರಣದಲ್ಲಿ ಹತ್ತು ಮಂದಿ ಸಿಪಿಎಂ ಕಾರ್ಯಕರ್ತರನ್ನು ಎರ್ನಾಕುಳಂ ಸಿಬಿಐ ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿ ತೀರ್ಪು ನೀಡಿದೆ. ಅದು ಹಾಗೂ ಇದರ ಹೊರತಾಗಿ ನಾಲ್ವರು ಸಿಪಿಎಂ ನೇತಾರರಿಗೆ ತಲಾ ಐದು ವರ್ಷ ಸಜೆ ವಿಧಿಸಿತ್ತು. ಇವರಿಗೆ ನೀಡಲಾದ ಶಿಕ್ಷೆ ಪ್ರಮಾಣ ಕಡಿಮೆಯಾಗಿದೆ. ಆದ್ದರಿಂದ ಅದರ ವಿರುದ್ಧ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗುವುದೆಂದು ರಾಜ್ಯ ವಿರೋಧ ಪಕ್ಷ ನಾಯಕ ವಿ.ಡಿ. ಸತೀಶನ್ ತಿಳಿಸಿದ್ದಾರೆ. ಈ ಬಗ್ಗೆ ಅವರು, ಕೊಲೆಗೈಯ್ಯಲ್ಪಟ್ಟ ಕೃಪೇಶ್ ಮತ್ತು ಶರತ್‌ಲಾಲ್‌ರ ಕುಟುಂಬದವರೊಂದಿಗೆ ನಿನ್ನೆ ಸಮಾಲೋಚನೆಯನ್ನು ನಡೆಸಿದ್ದಾರೆ. ಸಿಬಿಐ ತನಿಖೆಯಲ್ಲಿ ಕೆಲವೊಂದು ಲೋಪದೋಷಗಳು ಉಂಟಾಗಿದೆ ಎಂದು ಕಾಂಗ್ರೆಸ್ ಹೇಳಿದ್ದು, ಆದ್ದರಿಂದ ಈ ಕೊಲೆ ಪ್ರಕರಣದ ಬಗ್ಗೆ ಮರು ತನಿಖೆ ನಡೆಸಬೇಕೆಂಬ ವಿಷಯವನ್ನೂ ಕಾಂಗ್ರೆಸ್ ಇನ್ನೊಂದೆಡೆ ಪರಿಶೀಲಿಸುತ್ತಿದೆ ಎಂದು ಆ ಪಕ್ಷದ ನೇತಾರರು ತಿಳಿಸಿದ್ದಾರೆ.