ಕಳಮಶ್ಶೇರಿ ಸರಣಿ ಬಾಂಬ್ ಸ್ಫೋಟ: ಎನ್ಐಎ ತನಿಖೆ ಆರಂಭ
ಎರ್ನಾಕುಳಂ: ಕಳಮಶ್ಶೇರಿ ಕನ್ವೆನ್ಶನ್ ಹಾಲ್ನಲ್ಲಿ ನಿನ್ನೆ ಬೆಳಿಗ್ಗೆ ಆರಂಭಗೊಂಡಿದ್ದ ಕ್ರಿಶ್ಚಿಯನ್ ಉಪಪಂಗಡದವರೆಂದೇ ಕರೆಸಿಕೊಳ್ಳುತ್ತಿದ್ದ ಯಹೋವನ ಸಮುದಾಯದ ಮೂರು ದಿನಗಳ ಧಾರ್ಮಿಕ ವಿಚಾರ ಸಂಕೀರ್ಣದ ವೇಳೆ ಉಂಟಾದ ಸರಣಿ ಬಾಂಬ್ ನಡೆಸಿದ್ದು ನಾನೇ ಆಗಿದ್ದೇನೆ ಎಂದು ಸ್ವಯಂ ಘೋಷಿಸಿಕೊಂಡು ಚೆಲವನ್ನೂರು ವೇಲಿಕಗತ್ತ್ ವೀಟಿಲ್ನ ಮಾರ್ಟಿನ್ ಡೊಮಿನಿಕ್ (೫೨) ಎಂಬಾತ ಪೊಲೀಸರ ಮುಂದೆ ಸ್ವಯಂ ಆಗಿ ಶರಣಾಗಿದ್ದಾನೆ.
ಶರಣಾಗುವ ಮೊದಲು ಆತ ತನ್ನ ಫೇಸ್ ಬುಕ್ನಲ್ಲೂ ಈ ವಿಷಯ ತಿಳಿಸಿದ್ದನು. ಬಳಿಕ ಆತ ನೇರವಾಗಿ ಪೊಲೀಸ್ ಠಾಣೆಗೆ ಹಾಜರಾಗಿದ್ದಾನೆ. ಸ್ಫೋಟಕ್ಕೆ ಬಳಸಲಾಗಿದ್ದ ನೀಲಿ ಬಣ್ಣದ ಕಾರು ಮಹಿಳೆಯೋರ್ವೆಯ ಹೆಸರಲ್ಲಿದ್ದು ಅದನ್ನೂ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಬಾಂಬ್ ಸ್ಫೋಟ ನಡೆಸಿದ್ದು ನಾನೇ ಆಗಿದ್ದೇನೆ ಎಂದು ಡೊಮಿನಿಕ್ ಮಾರ್ಟಿನ್ ಸ್ವಯಂ ಹೇಳಿಕೊಂಡಿರುವುದು ಈ ಪ್ರಕರಣದ ತನಿಖೆಯ ದಿಕ್ಕು ತಪ್ಪಿಸಲು ನಡೆಸಲಾದ ಯತ್ನವಾಗಿದೆ. ಮಾರ್ಟಿನ್ನನ್ನು ಎದುರು ನಿಲ್ಲಿಸಿ ಕೆಲವು ಉಗ್ರಗಾಮಿ ಸಂಘಟನೆಗಳು ನಡೆಸಿದ ಕೃತ್ಯ ಇದಾಗಿರಬಹುದೆಂದು ತನಿಖಾ ತಂಡ ಅನುಮಾನವ್ಯಕ್ತಪ ಡಿಸಿದ್ದು, ಆದ್ದರಿಂದ ಆತನನ್ನು ಸಮಗ್ರವಾಗಿ ವಿಚಾರಣೆಗೊಳಪಡಿಸಿದ ಬಳಿಕವಷ್ಟೇ ಬಂಧನ ದಾಖಲಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.
ಇದೊಂದು ಭಯೋತ್ಪಾದಕ ಕೃತ್ಯವಾಗಿರಬಹುದೆಂಬ ಶಂಕೆ ಉಂಟಾಗಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ನೇರವಾಗಿ ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದೆ. ಮಾತ್ರವಲ್ಲ ಈ ಸ್ಫೋಟದ ಹಿಂದೆ ಯಾವುದಾದರೂ ವಿದೇಶಿ ನಂಟು ಇದೆಯೇ ಎಂಬ ಬಗ್ಗೆಯೂ ಎನ್ಐಎ ತನಿಖೆ ನಡೆಸುತ್ತಿದೆ.
ಕಳೆದ ೧೬ ವರ್ಷಗಳಿಂದ ನಾನು ಯಹೋವನ ಸಂಘಟನೆಯ ಸದಸ್ಯನಾಗಿದ್ದೇನೆ. ಆದರೆ ಕಳೆದ ಆರು ವರ್ಷಗಳಿಂದ ಆ ಸಂಘಟನೆಯನ್ನು ತೊರೆದಿದ್ದೆ. ಈ ಸಂಘಟನೆಯ ಚಿಂತನೆಗಳು ಈಗ ಬದಲಾಗಿದ್ದು, ರಾಷ್ಟ್ರಗೀತೆ ಹಾಡಬಾರದು, ಭಾರತೀಯ ಸೇನೆಯಲ್ಲಿ ಸೇರಬಾರದು ಇತ್ಯಾದಿ ಬೋಧನೆಯನ್ನು ಮಕ್ಕಳಿಗೆ ನೀಡಲಾಗುತ್ತಿತ್ತು. ಅದರಿಂದ ಕುಪಿತಗೊಂಡೇ ನಾನು ಬಾಂಬ್ ಸ್ಫೋಟ ನಡೆಸಿರುವುದಾಗಿ ಮಾರ್ಟಿನ್ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ಕಾರಣ ತಿಳಿಸಿದ್ದಾನೆ.