ಕಾಞಂಗಾಡ್, ರಾಜಪುರಂನಲ್ಲಿ ಪೊಲೀಸ್ ವಿರುದ್ಧ ಆಕ್ರಮಣ: ಎಸ್‌ಐ, ಎಎಸ್‌ಐ ಸಹಿತ ೬ ಮಂದಿಗೆ ಗಾಯ

ಕಾಸರಗೋಡು: ನಾಲ್ಕು ದಿನಗಳೊಳಗೆ ಕಾಸರಗೋಡು ಜಿಲ್ಲೆಯಲ್ಲಿ ಪೊಲೀಸರ ವಿರುದ್ಧ ನಾಲ್ಕು ಕಡೆ ಆಕ್ರಮಣ ಉಂಟಾಗಿದೆ. ನಿನ್ನೆ ರಾತ್ರಿ ಕಾಞಂಗಾಡ್, ರಾಜಪುರದಲ್ಲಿ ಸಂಭವಿಸಿದ ಅಕ್ರಮ ಘಟನೆಗಳಲ್ಲಿ ಎಸ್‌ಐ, ಎಎಸ್‌ಐ ಸಹಿತ ನಾಲ್ಕು ಮಂದಿ ಗಾಯಗೊಂಡಿದ್ದಾರೆ. ಹೊಸದುರ್ಗ ಪೊಲೀಸ್ ಠಾಣೆಯ ಪ್ರೊಬೇಷನರಿ ಎಸ್‌ಐ ಕೆ.ವಿ. ಜಿತಿನ್ (29), ಸಿವಿಲ್ ಪೊಲೀಸ್ ಆಫೀಸರ್ ಅಜೇಶ್ ಕುಮಾರ್ (40) ಎಂಬಿವರಿಗೆ ಅಲಾಮಿಪಳ್ಳಿ ಜಂಕ್ಷನ್ ಸಮೀಪ ಆಕ್ರಮಣ ನಡೆಸಲಾಗಿದೆ. ವಾಹನ ತಪಾಸಣೆ ನಡೆಸುತ್ತಿದ್ದಾಗ ತಲುಪಿದ ಸ್ಕೂಟರನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸುತ್ತಿದ್ದ ಮಧ್ಯೆ ಆಕ್ರಮಿಸಲಾಗಿದೆ. ಎಸ್‌ಐಯ ಬಲಕೈ ಹಿಡಿದು ತಿರುಗಿಸಿದ ಸ್ಕೂಟರ್ ಸವಾರ ಪೊಲೀಸ್ ಅಜೀಶ್‌ರಿಗೆ ಮೆಟ್ಟಿ, ಪರಚಿ ಗಾಯಗೊಳಿಸಿದ್ದಾನೆ. ಘಟನೆಯಲ್ಲಿ ಬಲ್ಲಾ, ಆಲಾಯಿ, ಶಾರದಾಸ್‌ನ ಸಿ.ಕೆ. ಮೋಹನ್ ಕುಮಾರ್ (52)ನನ್ನು ಬಂಧಿಸಲಾಗಿದೆ. ಮದ್ಯದಮಲಿನಲ್ಲಿ ಪರಾಕ್ರಮ ತೋರಿಸಿದ ಈತನನ್ನು ಸಾಹಸಿಕವಾಗಿ ಸೆರೆ ಹಿಡಿದು ವೈದ್ಯ ತಪಾಸಣೆಗೊಳಪಡಿಸಲಾಗಿದೆ. ಬಳಿಕ ಸ್ಟೇಷನ್‌ಗೆ ಕೊಂಡೊಯ್ದು ಆರೋಪಿಯನ್ನು ಬಂಧಿಸಲಾಗಿದೆ. ಈತ ಮಂಗಲ್ಪಾಡಿ ವೆಟರ್ನರಿ ಆಸ್ಪತ್ರೆಯ ನೌಕರನಾಗಿದ್ದಾನೆ.

ರಾಜಪುರಂ ಪೊಲೀಸ್ ಠಾಣೆ ವ್ಯಾಪ್ತಿಯ ಚಾಮುಂಡಿಕುನ್ನು ಶಿವಪುರದಲ್ಲಿ ಪೊಲೀಸರ ವಿರುದ್ಧ ನಡೆದ ಆಕ್ರಮಣದಲ್ಲಿ  ಠಾಣೆಯ ಅಸಿಸ್ಟೆಂಟ್ ಎಸ್‌ಐ ಮೋನ್ಸಿ ವರ್ಗೀಸ್ (54), ಪೊಲೀಸ್ ಸಜಿತ್ ಜೋಸೆಫ್ (24), ಕೆ.ಪಿ. ನಿಧಿನ್ (32), ಹೋಂಗಾರ್ಡ್ ಶಶಿಕುಮಾರ್ (58) ಎಂಬಿವರು ಗಾಯಗೊಂಡಿದ್ದಾರೆ. ಈ ಘಟನೆಯಲ್ಲಿ ಶಿವಪುರಂ ನಿವಾಸಿಗಳಾದ ಪ್ರಮೋದ್, ಪ್ರದೀಪ್ ಎಂಬಿವರ ವಿರುದ್ಧ ರಾಜಪುರಂ ಪೊಲೀಸರು ಕೇಸು ದಾಖಲಿಸಿದ್ದಾರೆ. ಪೊಲೀಸ್ ವಾಹನಕ್ಕೆ, ವಯರ್ಲೆಸ್ ಸೆಟ್‌ಗೆ ಹಾನಿ ಉಂಟಾಗಿದೆ. ಎರಡು ದಿನದ ಹಿಂದೆ ಬೇಡಗಂನಲ್ಲಿ ಹಾಗೂ ಕಾಸರಗೋಡು ಚೌಕಿಯಲ್ಲಿ ಪೊಲೀಸರ ವಿರುದ್ಧ ಆಕ್ರಮಣ ಉಂಟಾಗಿತ್ತು. ಇದರಲ್ಲಿ ಬೇಡಗಂನಲ್ಲಿ ಪೊಲೀಸ್ ಹಾಗೂ ಯುವಕನನ್ನು ಇರಿದು ಗಾಯಗೊಳಿಸಿದ ಸಹೋದರರನ್ನು ಇನ್ನೂ ಕೂಡಾ ಪತ್ತೆಹಚ್ಚಲಾಗಿಲ್ಲ. ಇವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

You cannot copy contents of this page