ಕಾಯರ್‌ಕಟ್ಟೆಯಲ್ಲಿ ಟಿಪ್ಪರ್ ಲಾರಿ ಚಾಲಕನ ಸಾವಿಗೆ ಕಾರಣ ಬೆನ್ನಿನ ಎಲುಬು ಮುರಿತ: ಸಮಗ್ರ ತನಿಖೆ ಆರಂಭಿಸಿದ ಪೊಲೀಸ್
ಮಂಜೇಶ್ವರ: ಬಾಯಾರುಪದವು ನಿವಾಸಿ ಟಿಪ್ಪರ್ ಲಾರಿ ಚಾಲಕ ಮುಹ ಮ್ಮದ್ ಅಶಿಫ್ (29) ಸಾವಿಗೀಡಾ ಗಲು ಕಾರಣ ಬೆನ್ನಿನ ಎಲುಬು ಮುರಿತವೇ ಆಗಿದೆ ಎಂದು ತಿಳಿದು ಬಂದಿದೆ. ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ನಡೆಸಿದ ಸಮಗ್ರ ಮರಣೋತ್ತರ ಪರೀಕ್ಷೆಯಲ್ಲಿ ಈ ಬಗ್ಗೆ ತಿಳಿದು ಬಂದಿದೆ. ಮರಣೋ ತ್ತರ ಪರೀಕ್ಷೆಯ ಪೂರ್ಣ ಮಾಹಿತಿ ಗಳು ಲಭಿಸಿದ ಬಳಿಕ ಮಾತ್ರವೇ ಎಲುಬು ಮುರಿತಕ್ಕೆ ಕಾರಣವೇನೆಂದು ತಿಳಿಯಬಹುದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಿನ್ನೆ ಮುಂಜಾನೆ ಕಾಯರ್‌ಕಟ್ಟೆಯಲ್ಲಿ ರಸ್ತೆ ಬದಿ ನಿಲ್ಲಿಸಿದ್ದ ಟಿಪ್ಪರ್ ಲಾರಿ ಸಮೀಪ ಮುಹಮ್ಮದ್ ಅಶಿಫ್ ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ನಾಗರಿಕರು ತಿಳಿಸಿದ ಮಾಹಿತಿಯಂತೆ ಪೊಲೀಸರು ತಲುಪಿ ಮುಹಮ್ಮದ್ ಅಶಿಫ್‌ರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.
ಮುಹಮ್ಮದ್ ಅಶಿಫ್‌ರ ಸಾವಿನಲ್ಲಿ ಆರಂಭದಿಂದಲೇ ನಿಗೂಢತೆ ಹುಟ್ಟಿಕೊಂ ಡಿದೆ. ಟಿಪ್ಪರ್ ಲಾರಿಯ ಒಳಗೆ ಹಾಗೂ ಹೊರಿಗೆ ರಕ್ತದ ಕಲೆಗಳು ಕಂಡು ಬಂದಿದ್ದು, ಚಪ್ಪಲಿಗಳು ಉಪೇಕ್ಷಿತ ಸ್ಥಿತಿಯಲ್ಲಿದ್ದುದು ಸಂಶಯಕ್ಕೆ ಕಾರಣ ವಾಗಿದೆ. ಕಾಲಿನಲ್ಲಿ ಗಾಯ ಕಂಡು ಬಂದಿತ್ತು. ಸಾವಿನ ಬಗ್ಗೆ ಹುಟ್ಟಿಕೊಂಡ ನಿಗೂಢತೆಯನ್ನು ಹೋಗಲಾಡಿಸಲು ಮರಣೋತ್ತರ ಪರೀಕ್ಷೆಯನ್ನು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ನಡೆಸಲಾಗಿದೆ. ಬೆನ್ನಿನ ಎಲುಬು ಮುರಿತದಿಂದಾಗಿ ಆಂತರಿಕ ರಕ್ತಸ್ರಾವ ಉಂಟಾಗಿರುವುದು ಸಾವಿಗೆ ಕಾರಣವಾಗಿದೆ ಎಂದು ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯಲ್ಲಿ ತಿಳಿಸಲಾಗಿದೆ. ಆದರೆ ಬೆನ್ನಿನ ಎಲುಬು ಮುರಿಯಲು ಕಾರಣವೇನೆಂದು ತಿಳಿ ಯಲು ತನಿಖೆ ಮುಂದುವರಿಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮುಹಮ್ಮದ್ ಅಶಿಫ್ ಬಿದ್ದುದರಿಂದ ಇದು ಸಂಭವಿಸಿರಬಹುದು ಅಥವಾ ಬೇರೆ ಯಾರಾದರೂ ದೂಡಿ ಹಾಕಿ ದರೂ ಈ ರೀತಿ ಬೆನ್ನಿನ ಎಲುಬು ಮುರಿತಕ್ಕೆ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ಅಭಿಪ್ರಾಯ ಪಟ್ಟಿವೆ. ಪರಿಯಾರಂನಲ್ಲಿ ನಡೆದ ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ನಿನ್ನೆ ರಾತ್ರಿ 9 ಗಂಟೆ ವೇಳೆ ಚಿಪ್ಪಾರುಪದವು ಜುಮಾ ಮಸೀದಿ ಪರಿಸರ ದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು.