ಕಾರಿನಲ್ಲಿ ಸಾಗಿಸುತ್ತಿದ್ದ 5 ಲಕ್ಷ ರೂ.ಗಳ ತಂಬಾಕು ಉತ್ಪನ್ನ ವಶ: ಓರ್ವ ಬಂಧನ
ಕುಂಬಳೆ: ಕರ್ನಾಟಕದಿಂದ ಕಾಸರಗೋಡು ಸಹಿತ ಕೇರಳಕ್ಕೆ ಅನಧಿಕೃತವಾಗಿ ಮದ್ಯ, ತಂಬಾಕು ಉತ್ಪನ್ನಗಳ ಸಹಿತ ಮಾದಕ ವಸ್ತುಗಳ ಸಾಗಾಟ ಮತ್ತೆ ತೀವ್ರಗೊಂಡಿದೆ.
ನಿನ್ನೆ ಕಾರಿನಲ್ಲಿ ಕಾಸರಗೋಡಿನತ್ತ ಸಾಗಿಸುತ್ತಿದ್ದ ೫ ಲಕ್ಷ ರೂಪಾಯಿಗಳ ತಂಬಾಕು ಉತ್ಪನ್ನಗಳನ್ನು ಕುಂಬಳೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ವಶಪಡಿಸಲಾಗಿದೆ. ಈ ಸಂಬಂಧ ಓರ್ವನನ್ನು ಬಂಧಿಸಲಾಗಿದೆ.
ಮಧೂರು ಹಿದಾಯತ್ ನಗರ ನಿವಾಸಿ ಅಬೂಬಕರ್ ಸಿದ್ಧಿಕ್ (33) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಮಾದಕ ವಸ್ತು ಸಾಗಾಟ ನಡೆಸುತ್ತಿರುವ ಬಗ್ಗೆ ಲಭಿಸಿದ ಗುಪ್ತ ಮಾಹಿತಿ ಪ್ರಕಾರ ಕುಂಬಳೆ ಎಸ್.ಐ. ಟಿ.ಎಂ. ವಿಪಿನ್ರ ನೇತೃತ್ವದ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಕುಂಬಳೆ ಸೆಕೆಂಡರಿ ಶಾಲೆ ಸಮೀಪದಲ್ಲಿ ಕಾರನ್ನು ತಪಾಸಣೆ ನಡೆಸಿದಾಗ ಅದರಲ್ಲಿದ್ದ ಅಬೂಬಕರ್ ಸಿದ್ಧಿಕ್ನ ವರ್ತನೆಯಲ್ಲಿ ಸಂಶಯ ಕಂಡು ಬಂದ ಹಿನ್ನೆಲೆಯಲ್ಲಿ ಕಾರನ್ನು ಪರಿಶೀಲಿಸಿದಾಗ ಕಾರಿನೊಳಗೆ 12 ಪ್ಲಾಸ್ಟಿಕ್ ಚೀಲಗಳಲ್ಲಾಗಿ ತಂಬಾಕು ಉತ್ಪನ್ನಗಳನ್ನು ಬಚ್ಚಿಡಲಾಗಿತ್ತು. ಸಿದ್ಧಿಕ್ ತಂಬಾಕು ಉತ್ಪನ್ನ ಸಾಗಿಸುತ್ತಿರುವುದು ಇದು ಎರಡನೇ ಬಾರಿಯಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಎಪ್ರಿಲ್ನಲ್ಲಿ ೩ ಲಕ್ಷ ರೂಪಾಯಿ ಮೌಲ್ಯದ ತಂಬಾಕು ಉತ್ಪನ್ನಗಳ ಸಹಿತ ಸಿದ್ಧಿಕ್ ಸೆರೆಗೀಡಾಗಿದ್ದನು. ಕಾಸರಗೋಡು ಜಿಲ್ಲೆಯ ಒಳ ಪ್ರದೇಶಗಳಿಗೆ ತಲುಪಿಸಿ ಮಾರಾಟ ಗೈಯ್ಯಲು ಈತ ಇದನ್ನು ತಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.