ಕಾರಿನಲ್ಲಿ ಸಾಗಿಸುತ್ತಿದ್ದ ೨೮.೫ ಗ್ರಾಂ ಎಂಡಿಎಂಎ ಸಹಿತ ಯುವಕ ಸೆರೆ
ಕಾಸರಗೋಡು: ಕಾರಿನಲ್ಲಿ ಸಾಗಿ ಸುತ್ತಿದ್ದ ೨೮.೫ ಗ್ರಾಂ ಮಾದಕ ದ್ರವ್ಯವಾದ ಎಂಡಿಎಂಎ ಸಹಿತ ಯುವಕನನ್ನು ಅಬಕಾರಿ ದಳ ಬಂಧಿಸಿದೆ.
ಪಡನ್ನಗ್ರಾಮದ ತೈಕ್ಕೇಪ್ಪುರಂ ಆಲಕ್ಕಲ್ ನಿವಾಸಿ ರಸೀಲ್ ಪಿ. (೩೯) ಬಂಧಿತನಾದ ಆರೋಪಿ. ಮಾದಕದ್ರವ್ಯ ಸಾಗಿಸುವ ಬಗ್ಗೆ ಲಭಿಸಿದ ಗುಪ್ತ ಮಾಹಿತಿಯನ್ವಯ ನೀಲೇಶ್ವರ ಅಬಕಾರಿ ರೇಂಜ್ ಕಚೇರಿಯ ಎಕ್ಸೈಸ್ ಇನ್ಸ್ ಪೆಕ್ಟರ್ ಸುಧೀರ್ ಕೆ.ಕೆ. ಯವರ ನೇತೃತ್ವದ ತಂಡ ನಿನ್ನೆ ಮುಂಜಾನೆ ಹೊಸದುರ್ಗ ತಾಲೂಕಿನ ಕೈದಕ್ಕಾಡ್ ನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಎಂಡಿಎಂಎ ಸಹಿತ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ಚಲಾಯಿಸುತ್ತಿದ್ದ ಟಾಟಾ ಅಲ್ಟ್ರಾಸ್ ಕಾರನ್ನೂ ಅಬಕಾರಿ ತಂಡ ವಶಕ್ಕೆ ತೆಗೆದುಕೊಂಡಿದೆ. ವಶಪಡಿಸಲಾದ ಮಾದಕ ದ್ರವ್ಯಕ್ಕೆ ಸುಮಾರು ಒಂದು ಲಕ್ಷ ರೂ. ಬೆಲೆ ಇದೆ ಎಂದು ಅಂದಾಜಿಸಲಾಗಿದೆ. ಬಂಧಿತ ಆರೋಪಿ ಬೆಂಗಳೂರಿನಿಂದ ಎಂಡಿಎಂಎ ಸಾಗಿಸಿ ಅದನ್ನು ಕಿರು ಪ್ಯಾಕೇಟ್ಗಳನ್ನಾಗಿಸಿ ಅಗತ್ಯದವರಿಗೆ ವಿತರಿಸುವ ವ್ಯಕ್ತಿಯಾಗಿದ್ದಾನೆಂದೂ ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಪ್ರಿವೆಂಟಿವ್ ಆಫೀಸರ್ಗಳಾದ ಸತೀಶನ್ ನಾಲುಪುರಯಿಲ್, ಸಿ.ಕೆ.ವಿ. ಸುರೇಶ್, ಸಿಇಒಗಳಾದ ಪ್ರಸಾದ್ ಎಂ.ಎಂ, ಶೈಲೇಶ್ ಕುಮಾರ್, ಸುನಿಲ್ ಕುಮಾರ್, ಮಹಿಳಾ ಸಿಇಒ ಇಂದಿರಾ ಮತ್ತು ಚಾಲಕ ದಿಲ್ಜಿತ್ ಎಂಬವರು ಒಳಗೊಂಡಿದ್ದರು.