ಕಾರು ಢಿಕ್ಕಿ ಹೊಡೆದು ಗಾಯಗೊಂಡ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ತಲುಪಿಸಿ ಮಾನವೀಯತೆ ತೋರಿಸಿದ ಆಟೋ ಚಾಲಕನಿಗೆ ಗೌರವ
ಕುಂಬಳೆ: ಕಾರು ಢಿಕ್ಕಿ ಹೊಡೆದು ಗಾಯಗೊಂಡು ರಸ್ತೆ ಬದಿ ಅಸಹಾಯಕನಾಗಿ ನಿಂತಿದ್ದ ಶಾಲಾ ವಿದ್ಯಾರ್ಥಿಯನ್ನು ತಕ್ಷಣ ಆಸ್ಪತ್ರೆಗೆ ತಲುಪಿಸಿ ಮಾನವೀಯತೆ ತೋರಿಸಿ ಇತರರಿಗೆ ಮಾದರಿಯಾದ ಆಟೋ ಚಾಲಕನನ್ನು ಶಾಲೆ ಅಧಿಕಾರಿಗಳು ಅಭಿನಂದಿಸಿ ಗೌರವಿಸಿದರು. ಕುಂಬಳೆಯಲ್ಲಿ ಆಟೋ ಚಾಲಕನಾಗಿರುವ ಕೊಡ್ಯಮ್ಮೆ ಪುಳಿಕ್ಕುಂಡ್ ನಿವಾಸಿ ಸಲ್ತು ಮೊಹಮ್ಮದ್ ಅವರನ್ನು ನಿನ್ನೆ ಕುಂಬಳೆ ಸರಕಾರಿ ಸೀನಿಯರ್ ಬೇಸಿಕ್ ಸ್ಕೂಲ್‌ನಲ್ಲಿ ನಡೆದ ಸಭೆಯಲ್ಲಿ ಗೌರವಿಸಲಾಯಿತು.
ಒಂದು ತಿಂಗಳ ಹಿಂದೆ ಸಲ್ತು ಮೊಹಮ್ಮದ್ ತನ್ನ ಆಟೋ ರಿಕ್ಷಾದಲ್ಲಿ ವಿದ್ಯಾರ್ಥಿಗಳನ್ನು ಕುಂಬಳೆಯ ಶಾಲೆಗೆ ತಲುಪಿಸುತ್ತಿದ್ದಾಗ ಕುಂಬಳೆ ಹೈಯರ್ ಸೆಕೆಂಡರಿ ಶಾಲಾ ರಸ್ತೆಯಲ್ಲಿ ಕಾರೊಂದು ಢಿಕ್ಕಿ ಹೊಡೆದು ಗಾಯಗೊಂಡ ವಿದ್ಯಾರ್ಥಿಯೋರ್ವ ಅಸಹಾಯಕನಾಗಿ ರಸ್ತೆ ಬದಿ ನಿಂತಿದ್ದನು. ಈ ವೇಳೆ ಹಲವು ಮಂದಿ ಅಲ್ಲಿ ನೆರೆದಿದ್ದರೂ ಯಾರೂ ಆತನನ್ನು ಆಸ್ಪತ್ರೆಗೆ ತಲುಪಿಸಲು ಮುಂದಾಗಿಲ್ಲ ಎನ್ನಲಾಗುತ್ತಿದೆ. ಬಾಲಕನ ಅಸಹಾಯಕ ಸ್ಥಿತಿಯನ್ನು ಕಂಡು ಸಲ್ತು ಮೊಹಮ್ಮದ್ ತನ್ನ ಆಟೋರಿಕ್ಷಾದಲ್ಲಿದ್ದ ವಿದ್ಯಾರ್ಥಿಗಳನ್ನು ಅಲ್ಲೇ ಇಳಿಸಿ ಬಾಲಕನನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲುಪಿಸಿ ಶಾಲಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅನಂತರ ಅಲ್ಲಿಂದ ಮರಳಿ ಬಂದು ತನ್ನ ಆಟೋರಿಕ್ಷಾದಿಂದ ಇಳಿಸಿದ ವಿದ್ಯಾರ್ಥಿಗಳನ್ನು ಶಾಲೆಗೆ ತಲುಪಿಸಿದರು. ಸಲ್ತು ಮೊಹಮ್ಮದ್‌ರ ಈ ಮಾದರಿ ಸೇವೆಗೆ ಶಾಲಾ ಅಧಿಕಾರಿಗಳ ಸಹಿತ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಿನ್ನೆ ಶಾಲೆಯಲ್ಲಿ ಸಭೆ ನಡೆದಿದ್ದು, ಈ ವೇಳೆ ಅಲ್ಲಿಗೆ ಸಲ್ತು ಮೊಹಮ್ಮದ್‌ರನ್ನು ಆಹ್ವಾನಿಸಲಾಗಿತ್ತು. ಸಭೆಯಲ್ಲಿ ಶಾಲಾ ಅಧಿಕಾರಿಗಳ ವತಿಯಿಂದ ಅವರನ್ನು ಗೌರವಿಸಲಾಗಿದೆ. ಕುಂಬಳೆ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಕೆ.ಪಿ. ವಿನೋದ್ ಕುಮಾರ್ ಅವರು ಸಲ್ತು ಮೊಹಮ್ಮದ್‌ರಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು.