ಕಾರು ವಿದ್ಯುತ್ ಕಂಬಕ್ಕೆ ಢಿಕ್ಕಿ: ತಪ್ಪಿದ ಭಾರೀ ಅಪಾಯ
ಚೆರ್ಕಳ: ನಿಯಂತ್ರಣ ತಪ್ಪಿದ ಕಾರು ವಿದ್ಯುತ್ ಕಂಬಕ್ಕೆ ಬಡಿದಿದ್ದು, ಇದರಿಂದ ವಿದ್ಯುತ್ ಕಂಬ ಮುರಿದು ಬಿದ್ದಿದೆ. ಕಾರಿಲ್ಲಿದ್ದವರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.
ನಿನ್ನೆ ಮಧ್ಯಾಹ್ನ1.45ರ ವೇಳೆ ಚೆರ್ಕಳ ಕೆ.ಕೆಪುರದಲ್ಲಿ ನಿರ್ಮಾಣ ನಡೆಯುತ್ತಿರುವ ಆಸ್ಪತ್ರೆಯ ಮುಂಭಾಗದ ರಸ್ತೆಯಲ್ಲಿ ಅಪಘಾತವುಂಟಾಗಿದೆ. ಬೋವಿಕ್ಕಾನ ಭಾಗದಿಂದ ಚೆರ್ಕಳದತ್ತ ತೆರಳುತ್ತಿದ್ದ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದೆ. ಇದರಿಂದ ಕಂಬ ತುಂಡಾಗಿ ಕಾರಿನ ಮೇಲೆ ಬಿದ್ದಿದೆ.
ಇದೇ ಸಂದರ್ಭದಲ್ಲಿ ಆ ರಸ್ತೆಯಲ್ಲಿ ಬಂದ ಆಟೋ ಚಾಲಕ ಅಶ್ರಫ್ ಮುನ್ನಿ ಎಂಬವರು ನೀಡಿದ ಮಾಹಿತಿ ಪ್ರಕಾರ ಕೆಎಸ್ಇಬಿ ಅಧಿಕಾರಿಗಳು ವಿದ್ಯುತ್ ಸಂಪರ್ಕ ವಿಚ್ಛೇಧಿಸಿದುದರಿಂದ ಭಾರೀ ದುರಂತ ತಪ್ಪಿದೆ. ಬಳಿಕ ನೌಕರರು ತಲುಪಿ ತೆರವುಗೊಳಿಸಿ ವಾಹನ ಸಂಚಾರಕ್ಕೆ ಸೌಕರ್ಯ ಏರ್ಪಡಿಸಿದರು.