ಕಾರ್ಮಾರು ದೇಗುಲದಲ್ಲಿ ದೇವತಾ ಪ್ರತಿಷ್ಠೆ, ಜೀವ ಕಲಶಾಭಿಷೇಕ
ಮಾನ್ಯ: ಕಾರ್ಮಾರು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಇಂದು ಬೆಳಿಗ್ಗೆ ದೇವತಾಪ್ರತಿಷ್ಠೆ, ಜೀವ ಕಲಶಾಭಿಷೇಕ, ನಿದ್ರಾಕಲಶಾಭಿಷೇಕ, ಪ್ರತಿಷ್ಠಾ ಬಲಿ ನಡೆಯಿತು. 108 ತೆಂಗಿನಕಾಯಿ ಮಹಾಗಣಪತಿ ಹೋಮ, ಪ್ರತಿಷ್ಠಾಪಾಣಿ ಮೊದಲಾದ ವೈದಿಕ ಕಾರ್ಯಕ್ರಮಗಳು ಜರಗಿದೆ. ಸಂಜೆ ಕವಾಟಬಂಧನ, ಅಂಕುರಪೂಜೆ, ಮಂಟಪ ಸಂಸ್ಕಾರ, ಸೋಪಾನಪೂಜೆ ಮೊದಲಾದ ಕಾರ್ಯಕ್ರಮಗಳು ಜರಗಲಿದೆ. ನಿನ್ನೆ ಬೆಳಿಗ್ಗೆ ಗಣಪತಿ ಹೋಮ, ತ್ರಿಕಾಲಪೂಜೆ, ಸಂಹಾರತತ್ವ ಹೋಮ ಸಹಿತ ವಿವಿಧ ವೈದಿಕ ಕಾರ್ಯಕ್ರಮಗಳು ಜರಗಿದೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಹಮ್ಮಾಯಿ ಯಕ್ಷಗಾನ ಕಲಾಸಂಘ ಬಾಯಾರುಪದವು ಇವರಿಂದ ಯಕ್ಷಗಾನ ತಾಳಮದ್ದಳೆ, ಭಕ್ತಿಗೀತೆ, ಶಾಸ್ತ್ರೀಯ ಸಂಗೀತ, ಹರಿಕಥೆ, ಭರತನಾಟ್ಯ, ಭಕ್ತಿ ಸಿಂಚನ ನಡೆಯಿತು. ಇಂದು ಬೆಳಿಗ್ಗೆ ನಡೆದ ಧಾರ್ಮಿಕ ಸಭೆಯಲ್ಲಿ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಶ್ರೀ ವಿವಿಕ್ತಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿದರು. ವಾಸ್ತುಶಿಲ್ಪಿ ಕೃಷ್ಣಪ್ರಸಾದ್ ಮುನಿಯಂಗಳ ಅಧ್ಯಕ್ಷತೆ ವಹಿಸಿದರು. ಅಪರಾಹ್ನ ಶಾಂಭವಿ ಪ್ರಾಣೇಶ್‌ರಿಂದ ಹರಿಕಥೆ, ಮಹಿಳಾ ಯಕ್ಷಗಾನ ಮಂಡಳಿ ಪುತ್ತೂರು ಇವರಿಂದ ಯಕ್ಷಗಾನ ತಾಳಮದ್ದಳೆ, ರಾತ್ರಿ ೭.೩೦ತ್ತೆ ವಿದುಷಿ ಲತಾ ಶಶಿಧರನ್ ಇವರ ಶಿಷ್ಯವೃಂದದವರಿಂದ ಭರತನಾಟ್ಯ, ರಂಗಸಿರಿ ಸಾಂಸ್ಕೃತಿಕ ವೇದಿಕೆ, ಯಕ್ಷರಂಜಿನಿ ಕಲಾಕೇಂದ್ರ ಬದಿಯಡ್ಕ ಇವರ ಸಹಯೋಗದಲ್ಲಿ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.