ಕಾಸರಗೋಡಿನ 9 ಸೇರಿದಂತೆ ರಾಜ್ಯದಲ್ಲಿ 194  ಮಂದಿ ಕಣದಲ್ಲಿ;ಇನ್ನು ಅಬ್ಬರದ ಪ್ರಚಾರದಿನಗಳು

ಕಾಸರಗೋಡು: ನಾಮಪತ್ರ ಹಿಂಪಡೆಯುವ ಕೊನೆಯ ದಿನಾಂಕ ನಿನ್ನೆ ಮುಕ್ತಾಯಗೊಂಡಿರುವಂತೆಯೇ ಕೇರಳದ ಒಟ್ಟು 20 ಲೋಕಸಭಾ ಕ್ಷೇತ್ರದಲ್ಲಿ ಕಾಸರಗೋಡಿನ ಒಂಭತ್ತು ಸೇರಿದಂತೆ ಒಟ್ಟು 194 ಉಮೇದ್ವಾರರು ಅಂತಿಮ ಚುನಾವಣಾ ಕಣದಲ್ಲಿ ಉಳಿದುಕೊಂಡಿ ದ್ದಾರೆ. ಅವರಿಗೆ ಚಿನ್ನೆಯನ್ನೂ ಮಂಜೂರು ಮಾಡಲಾಗಿದೆ.

ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಎಂ.ವಿ. ಬಾಲಕೃಷ್ಣನ್ (ಸಿಪಿಎಂ-ಕತ್ತಿ ಸುತ್ತಿಗೆ ನಕ್ಷತ್ರ), ರಾಜ್‌ಮೋಹನ್ ಉಣ್ಣಿತ್ತಾನ್ (ಕಾಂಗ್ರೆಸ್-ಕೈ), ಎಂ.ಎಲ್. ಅಶ್ವಿನಿ (ಬಿಜೆಪಿ-ತಾವರೆ), ಎಂ. ಸುಕುಮಾರಿ (ಬಿಎಸ್‌ಪಿ-ಆನೆ), ಪಕ್ಷೇತರರಾದ ಅನೀಶ್ ಪಯ್ಯನ್ನೂರು (ಆಟೋರಿಕ್ಷಾ), ಎನ್. ಕೇಶವ ನಾಯ್ಕ (ಕಬ್ಬು ಕೃಷಿ ರೈತ), ಎನ್. ಬಾಲಕೃಷ್ಣನ್ (ಚೆಸ್ ಬೋರ್ಡ್), ಕೆ. ಮನೋಹರನ್ (ಬ್ಯಾಟ್) ಮತ್ತು ಕೆ.ಆರ್. ರಾಜೇಶ್ವರಿ (ಸೈಕಲ್ ಪಂಪ್).

ಕೇರಳದಲ್ಲಿ ಲೋಕಸಭಾ ಚುನಾವಣೆ ಎಪ್ರಿಲ್ ೨೬ರಂದು ನಡೆಯಲಿದ್ದು, ಅದಕ್ಕೆ ಇನ್ನು ಕೇವಲ ೧೭ ದಿನಗಳು ಮಾತ್ರವೇ ಉಳಿದುಕೊಂಡಿದೆ. ಕಾಸರಗೋಡು ಲೋಕಸಭಾ ಕ್ಷೇತ್ರದ ೧೪,೫೨,೨೩೦ ಮಂದಿ ಮತದಾರರು ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಯಾರನ್ನು ಗೆಲ್ಲಿಸಬೇಕೆಂಬ ತೀರ್ಪನ್ನು ತಮ್ಮ ಮತದಾನ ಹಕ್ಕು ಚಲಾಯಿಸುವ ಮೂಲಕ ನೀಡಲಿದ್ದರೆ.

ಚುನಾವಣಾ ಕಣದಲ್ಲಿ ಉಳಿದುಕೊಂಡಿರುವ ಉಮೇದ್ವಾರರ ಅಂತಿಮ ಚಿತ್ರಣ ಹೊರಬಂದಿರುವುದರ ಜತೆ  ಚುನಾವಣಾ ಪ್ರಚಾರದ ಅಬ್ಬರ ಇನ್ನಷ್ಟು ತಾರಕಕ್ಕೇರಲಿದೆ. ಚುನಾವಣಾ ಪ್ರಚಾರಕ್ಕಾಗಿ ವಿವಿಧ ರಾಜಕೀಯ ಪಕ್ಷಗಳ ಕೇಂದ್ರ ಮತ್ತು ರಾಜ್ಯ ನೇತಾರರೂ ಕಾಸರಗೋಡು ಲೋಕಸಭಾ ಕ್ಷೇತ್ರಕ್ಕೆ ಆಗಮಿಸಿ ಅಬ್ಬರದ ಪ್ರಚಾರ ನಡೆಸಲಿದ್ದಾರೆ. ಚುನಾವಣಾ ದಿನಾಂಕ ಘೋಷಣೆ ಹೊರಬಂದ ದಿನದಿಂದಲೇ  ರಾಜಕೀಯ ಪಕ್ಷಗಳು ಮತಗಳನ್ನು ತಮ್ಮ ಬುಟ್ಟಿಯೊಳಗಾಗಿಸುವ ಪ್ರಯತ್ನ ಆರಂಭಿಸಿದೆ. ಮಾತ್ರವಲ್ಲ ಅಂದಿನಿಂದಲೇ ಪ್ರಚಾರ, ಕುಟುಂಬಸಂಗಮ, ಪ್ರಚಾರಯಾತ್ರೆ ಇತ್ಯಾದಿಗಳನ್ನೂ ಆರಂಭಿಸಿದೆ.

ಕಾಸರಗೋಡು ಲೋಕಸಭಾ ಚುನಾ ವಣೆಯಲ್ಲಿ ಪ್ರಧಾನವಾಗಿ ಯುಡಿಎಫ್‌ನ ರಾಜ್‌ಮೋಹನ್ ಉಣ್ಣಿತ್ತಾನ್, ಎಡರಂಗದ ಎಂ.ವಿ. ಬಾಲಕೃಷ್ಣನ್ ಮತ್ತು ಎನ್‌ಡಿಎಯ  ಎಂ.ಎಲ್. ಅಶ್ವಿನಿಯವರ ನಡುವೆ ಪ್ರಧಾನವಾಗಿ  ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಈ ಮೂವರು ಉಮೇದ್ವಾರರೂ  ಗೆಲುವಿನ ತುಂಬು ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.

ಕಾಸರಗೋಡು ಲೋಕಸಭಾ  ಕ್ಷೇತ್ರದಲ್ಲಿ ಇದೇ ಪ್ರಥಮವಾಗಿ ಮಹಿಳಾ ಅಭ್ಯರ್ಥಿಗಳನ್ನು (ಬಿಜೆಪಿ ಮತ್ತು ಬಿಎಸ್‌ಪಿ)ಕಣಕ್ಕಿಳಿಸಿರುವುದು ಈ ಚುನಾವಣೆಯ ವಿಶೇಷತೆಗಳಲ್ಲೊಂದಾಗಿದೆ.

Leave a Reply

Your email address will not be published. Required fields are marked *

You cannot copy content of this page