ಕುಂಬಳೆಯಲ್ಲಿ ಬ್ಯಾಂಕ್ ಕಳವು ಯತ್ನ: ಮೂರು ಬೆರಳಚ್ಚು ಪತ್ತೆ
ಕುಂಬಳೆ: ಕುಂಬಳೆ ಸೇವಾ ಸಹಕಾರಿ ಬ್ಯಾಂಕ್ನ ಪೆರುವಾಡ್ ಶಾಖೆಯಲ್ಲಿ ನಡೆದ ಕಳವು ಯತ್ನ ಪ್ರಕರಣದಲ್ಲಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಆರೋಪಿಗಳ ಕುರಿತಾಗಿ ಮಾಹಿತಿ ಲಭಿಸಿರುವು ದಾಗಿಯೂ ಶೀಘ್ರ ಬಂಧನ ಸಾಧ್ಯವಿದೆಯೆಂದು ಪೊಲೀಸ್ ಮೂಲಗಳು ತಿಳಿಸಿವೆ. ಬ್ಯಾಂಕ್ನಿಂದ ಮೂರು ಬೆರಳಚ್ಚುಗಳು ಲಭಿಸಿವೆ. ಸಿಸಿ ಟಿವಿ ಕ್ಯಾಮರಾಗಳನ್ನು ಇಂದು ಪರಿಶೀಲಿಸಲಾಗುವುದು. ಬ್ಯಾಂಕ್ನ ಮೆನೇಜರ್ ಮಿನಿ ಮೋಳ್ ತಲುಪಿ ಬ್ಯಾಂಕ್ನಲ್ಲಿ ಪರಿಶೀಲನೆ ನಡೆಸಿದ್ದು, ಹಣ ಸಹಿತ ಯಾವುದೇ ಸೊತ್ತು ಕಳವಿಗೀಡಾಗಿಲ್ಲವೆಂದು ಖಚಿತಪಡಿಸಿದ್ದಾರೆ. ಮೊನ್ನೆ ರಾತ್ರಿ ಕಳವು ಯತ್ನ ನಡೆದಿದೆ. ರಾಷ್ಟ್ರೀಯ ಹೆದ್ದಾರಿ ಬದಿಯ ಎರಡಂತಸ್ತಿನ ಕಟ್ಟಡದ ಕೆಳ ಮಹಡಿಯಲ್ಲಿ ಬ್ಯಾಂಕ್ ಕಾರ್ಯಾಚರಿಸುತ್ತಿದೆ. ಕಟ್ಟಡದ ಬದಿಯ ಕಿಟಿಕಿಯ ಸರಳುಗಳನ್ನು ಮುರಿದು ಕಳ್ಳರು ಒಳಗೆ ನುಗ್ಗಿದ್ದಾರೆ. ಸರಳು ಕತ್ತರಿಸಲು ಬಳಸಿದ ಇಲೆಕ್ಟ್ರಿಕ್ ಕಟ್ಟರ್ ಬೇರೆಲ್ಲಿಂದಲೋ ಕಳವುಗೈದಿದ್ದಿರಬಹುದೆಂದು ಸಂಶಯಿಸಲಾಗುತ್ತಿದೆ. ಅದು ಉಪೇಕ್ಷಿತ ಸ್ಥಿತಿಯಲ್ಲಿ ಬ್ಯಾಂಕ್ ಬಳಿ ಪತ್ತೆಯಾಗಿದೆ. ಬ್ಯಾಂಕ್ನಿಂದಲೇ ವಿದ್ಯುತ್ ಬಳಸಿ ಅದನ್ನು ಕಾರ್ಯಾಚರಿಸಲಾಗಿದೆ. ಘಟನೆ ವೇಳೆ ಬ್ಯಾಂಕ್ನ ಕಾವಲುಗಾರ ಬೇರೊಂದು ಕೊಠಡಿಯಲ್ಲಿ ನಿದ್ರಿಸಿದ್ದನೆನ್ನಲಾಗಿದೆ. ನಿನ್ನೆ ಬೆಳಿಗ್ಗೆ ಕಳವು ಯತ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಲಭಿಸಿದ ದೂರಿನಂತೆ ಕುಂಬಳೆ ಠಾಣೆ ಇನ್ಸ್ಪೆಕ್ಟರ್ ಕೆ.ಪಿ. ವಿನೋದ್ ಕುಮಾರ್ ನೇತೃತ್ವದ ಪೊಲೀಸರು ತಲುಪಿ ತನಿಖೆ ಆರಂಭಿಸಿದ್ದಾರೆ. ಬ್ಯಾಂಕ್ನ ಒಳಗೆ ಹಾಗೂ ಹೊರಗೆ ಮೆಣಸಿನ ಹುಡಿ ಸಿಂಪಡಿಸಲಾಗಿದೆ. ಶ್ವಾನದಳಕ್ಕೆ ಕಳ್ಳರ ವಾಸನೆ ಸಿಗದಿರಲು ಈ ಮೆಣಸಿನ ಹುಡಿ ಸಿಂಪಡಿಸಿರಬಹು ದೆಂದು ಅಂದಾಜಿಸಲಾಗಿದೆ. ಶ್ವಾನದಳವೂ ತಲುಪಿ ಪರಿಶೀಲನೆ ನಡೆಸಿದೆ.