ಕುಂಬಳೆಯಲ್ಲಿ ವಾನರ ದಾಳಿ ಮದ್ರಸಾ ಅಧ್ಯಾಪಕ, ವಿದ್ಯಾರ್ಥಿಗೆ ಗಾಯ
ಕುಂಬಳೆ: ಕುಂಬಳೆಯಲ್ಲಿ ವಾನರವೊಂದು ನಡೆಸಿದ ದಾಳಿಯಿಂದ ಮದ್ರಸಾ ಅಧ್ಯಾಪಕ ಹಾಗೂ ಸೈಕಲ್ ಸವಾರನಾದ ವಿದ್ಯಾರ್ಥಿ ಗಾಯಗೊಂಡಿದ್ದಾರೆ. ನಿನ್ನೆ ಸಂಜೆ ೫.೪೦ರ ವೇಳೆ ಈ ಘಟನೆ ನಡೆದಿದೆ. ಕುಂಬಳೆ ಸಿಎಚ್‌ಸಿ ರಸ್ತೆಯಲ್ಲಿರುವ ತ್ವಾಹ ಮಸೀದಿಯಲ್ಲಿ ಕಾರ್ಯಾಚರಿಸುವ ಮದ್ರಸಾ ಅಧ್ಯಾಪಕ ಪವಾಸ್ ದಾರಿಮಿ ಮೇಲೆ ವಾನರ ಮೊದಲು ದಾಳಿ ನಡೆಸಿದೆ.
ಮಕ್ಕಳು ಮದ್ರಸದೊಳಗೆ ಪ್ರವೇಶಿಸಿದ ಬಳಿಕ ಗೇಟ್ ಹಾಕಲೆಂದು ಅಧ್ಯಾಪಕ ಹೊರಗೆ ಬಂದಾಗ ಪರಿಸರದಲ್ಲಿ ಅವಿತುಕೊಂಡಿದ್ದ ವಾನರ ದಿಢೀರ್ ದಾಳಿ ನಡೆಸಿದೆ. ಕಟ್ಟಡದ ಮೇಲಿಂದ ಪವಾಸ್ ದಾರಿಮಿಯ ತಲೆ ಮೇಲೆ ಹಾರಿದ ವಾನರ ಪರಚಿ ಗಾಯಗೊಳಿಸಿ ಪರಾರಿಯಾಗಿದೆ. ಬಳಿಕ ಮಸೀದಿ ಆವರಣದೊಳಗಿರುವ ಮರಕ್ಕೆ ಹತ್ತಿದೆ. ಇದೇ ವೇಳೆ ಸಮೀಪದ ರಸ್ತೆಯಲ್ಲಿ ಸೈಕಲ್‌ನಲ್ಲಿ ತೆರಳುತ್ತಿದ್ದ ವಿದ್ಯಾರ್ಥಿಯ ಮೇಲೂ ವಾನರ ಹಾರಿದ್ದು, ಇದರಿಂದ ಸೈಕಲ್ ಬಿದ್ದು ಬಾಲಕ ಗಾಯಗೊಂಡಿದ್ದಾನೆ. ಅಷ್ಟರೊಳಗೆ ಅಲ್ಲಿಂದ ವಾನರ ಪರಾರಿಯಾಗಿದೆ.
ಕಳೆದ ಎರಡು ವರ್ಷಳಿಂದ ಕುಂಬಳೆ ಪೇಟೆ ಹಾಗೂ ಪರಿಸರ ಪ್ರದೇಶಗಳಲ್ಲಿ ವಾನರ ಉಪಟಳ ತೀವ್ರಗೊಂಡಿರುವುದಾಗಿ ಸ್ಥಳೀಯರು ತಿಳಿಸುತ್ತಿದ್ದಾರೆ. ಈ ಬಗ್ಗೆ ನಾಗರಿಕರು ಪಂಚಾಯತ್ ಹಾಗೂ ಅರಣ್ಯ ಇಲಾಖೆಗೆ ತಿಳಿಸಿ ಸಮಸ್ಯೆ ಪರಿಹಾರಕ್ಕೆ ಮನವಿ ಮಾಡಿದ್ದರು. ಇದರಿಂದ ಒಮ್ಮೆ ಅರಣ್ಯಾಧಿಕಾರಿಗಳು ತಲುಪಿ ಗೂಡು ಇರಿಸಿ ತೆರಳಿದ್ದರು. ಆದರೆ ಅದರಲ್ಲಿ ಸಿಲುಕದೆ ವಾನರಗಳು ತಪ್ಪಿಸಿಕೊಂಡಿದ್ದವೆನ್ನಲಾಗಿದೆ. ಈ ಪ್ರದೇಶದಲ್ಲಿ ಇದೀಗ ಹಲವು ವಾನರಗಳು ಬೀಡುಬಿಟ್ಟಿದ್ದು, ಇದರಿಂದ ಸಮಸ್ಯೆ ತೀವ್ರಗೊಂಡಿದೆ. ಇದಕ್ಕೆ ಪರಿಹಾರ ಕಾಣಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.