ಕುಂಬಳೆ ಪೊಲೀಸ್ ಠಾಣೆಗೆ ವ್ಯಾಪಾರಿಗಳಿಂದ ತಕ್ಕಡಿ ಕೊಡುಗೆ
ಕುಂಬಳೆ: ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಕುಂಬಳೆ ಘಟಕ ಕುಂಬಳೆ ಪೊಲೀಸ್ ಠಾಣೆಗೆ ಇಲೆಕ್ಟ್ರಾನಿಕ್ ತೂಕದ ಯಂತ್ರ (ತಕ್ಕಡಿ)ಯನ್ನು ಉಚಿತವಾಗಿ ನೀಡಿದೆ. ಪೊಲೀಸರು ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಳ್ಳುವ ಗಾಂಜಾ, ಮತ್ತಿತರ ವಸ್ತುಗಳನ್ನು ತೂಕ ಮಾಡಲು ಸಹಾಯವಾಗಲೆಂದು ಈ ಯಂತ್ರವನ್ನು ಒದಗಿಸಲಾಗಿದೆ. ಇದುವರೆಗೆ ಹೆಚ್ಚಿನ ಪ್ರಮಾಣದಲ್ಲಿ ಅಕ್ರಮ ವಸ್ತುಗಳು ಪತ್ತೆಯಾದಲ್ಲಿ ಅದನ್ನು ಬೇರೆಡೆಗೆ ತೆರಳಿ ತೂಕ ಮಾಡಬೇಕಾಗಿ ಬರುತ್ತಿತ್ತು. ಇನ್ನು ಮುಂದೆ ಅದರ ಅನಿವಾರ್ಯತೆ ಉಂಟಾಗಲಾರದು.
ಕುಂಬಳೆ ಪೊಲೀಸ್ ಠಾಣೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆವಿವಿಇಎಸ್ ಕುಂಬಳೆ ಘಟಕ ಅಧ್ಯಕ್ಷ ರಾಜೇಶ್ ಮನಯತ್ತ್ ಕುಂಬಳೆ ಠಾಣೆ ಇನ್ಸ್ಪೆಕ್ಟರ್ ಕೆ.ಪಿ. ವಿನೋದ್ ಕುಮಾರ್, ಎಸ್ಐ ಶ್ರೀಜೇಶ್, ಜನಮೈತ್ರಿ ಬೀಟ್ ಆಫೀಸರ್ ಗೋವಿಂದನ್ ಎಂಬಿವರಿಗೆ ತೂಕ ಮಾಡುವ ಯಂತ್ರವನ್ನು ಹಸ್ತಾಂತರಿಸಿದರು. ಕೆವಿವಿಇಎಸ್ ಘಟಕ ಪ್ರಧಾನ ಕಾರ್ಯದರ್ಶಿ ಸತ್ತಾರ್ ಆರಿಕ್ಕಾಡಿ, ಕೋಶಾಧಿಕಾರಿ ಅನ್ವರ್ ಸಿ.ಟಿ, ಇತರ ಪದಾಧಿಕಾರಿಗಳಾದ ಚಕ್ಕರ ಅಮ್ಮಿಂಞಿ, ಹಮೀದ್ ರಾಜಧಾನಿ, ಸಂತೋಷ್ ಬಟ್ಟುಂಞಿ, ಕಾದರ್ ಪ್ರೈಂ, ಲತೀಫ್ ಕೋರ್ನರ್ ಹಾಗೂ ಇತರ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.